ಪುತ್ತೂರು: ಒಂದು ಕಡೆ ಶಾಸಕ ಅಶೋಕ್ ರೈ ಅವರ ಕನಸಿನ ಯೋಜನೆಯಾದ ಉಪ್ಪಿನಂಗಡಿ–ಬೊಳುವಾರು ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮತ್ತೊಂದು ಕಡೆ ಪಡೀಲ್ ಪ್ರದೇಶದಲ್ಲಿ ಕೊಳಚೆ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ಇದು ಇಂದು-ನಿನ್ನೆಯ ಸಮಸ್ಯೆಯಲ್ಲ. ಹಲವು ದಿನಗಳಿಂದ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆಯ ಜೊತೆಗೆ ಆರೋಗ್ಯ ಸಮಸ್ಯೆಗಳ ಭೀತಿಯೂ ಎದುರಾಗಿದೆ.
ಕೊಳಚೆ ನೀರು ಎಲ್ಲಿಂದ ಬರುತ್ತಿದೆ, ಯಾವ ಕಾರಣದಿಂದ ರಸ್ತೆಗೆ ಹರಿಯುತ್ತಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ, ಮೂಲಭೂತ ಸ್ವಚ್ಛತಾ ಸಮಸ್ಯೆಗಳನ್ನು ಕಡೆಗಣಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ಪ್ರತಿ ಸಮಸ್ಯೆಗೂ ಶಾಸಕ ಅಶೋಕ್ ರೈ ಅವರೇ ಬರಬೇಕೇ? ಸ್ಥಳೀಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಸಮಸ್ಯೆ ಪರಿಹರಿಸಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







