ಖಾತೆ ಹಂಚಿಕೆಯಾಗಿ ಹಲವು ದಿನಗಳು ಕಳೆದರೂ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ದೂರ ಉಳಿದಿದ್ದ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಕೊನೆಗೂ ಜವಾಬ್ದಾರಿಯನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನಡೆಸಿದ ಸಂಧಾನ ಯಶಸ್ವಿಯಾದ ಬೆನ್ನಲ್ಲೇ ಸಚಿವರು ಜೂನ್ 16 ರಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದರು.
ಆದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅವರು ಐದು ನಗರ ಪಾಲಿಕೆಗಳ ಇಂಜಿನಿಯರ್‌ಗಳು ಹಾಗೂ ಆಯುಕ್ತರಿಗೆ ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆಯ ಹೆಸರಿನಲ್ಲಿ ಭರ್ಜರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆ ಮಾಡುವುದು ರಾಕೆಟ್ ಸೈನ್ಸಾ?
ಸಭೆಯುದ್ದಕ್ಕೂ ರಸ್ತೆ ಗುಂಡಿಗಳ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಸಚಿವ ಕೃಷ್ಣ ಬೈರೇಗೌಡ, “ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ರಸ್ತೆ ನಿರ್ಮಾಣ ಮಾಡುವುದು ನಿಮಗೇನು ರಾಕೆಟ್ ಸೈನ್ಸಾ?” ಎಂದು ಇಂಜಿನಿಯರ್‌ಗಳನ್ನು ನೇರವಾಗಿ ಪ್ರಶ್ನಿಸಿದರು. ನೆರೆ ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ರಸ್ತೆಗಳು ಎಷ್ಟು ಗುಣಮಟ್ಟದಿಂದ ಕೂಡಿವೆ ಎಂಬುದನ್ನು ಒಮ್ಮೆ ಗಮನಿಸಿ ಎಂದು ಕಿವಿಮಾತು ಹೇಳಿದ ಅವರು, “ಸರ್ಕಾರದಿಂದ ನಿಮಗೇನಾದರೂ ಅನುದಾನದ ಕೊರತೆ ಇದೆಯೇ? ಬಜೆಟ್ ಕಡಿಮೆ ಕೊಟ್ಟಿದ್ದೇವಾ? ಹೀಗಿದ್ದರೂ ಸಿಲಿಕಾನ್ ಸಿಟಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲು ನಿಮಗೆ ಯಾಕೆ ಸಾಧ್ಯವಾಗುತ್ತಿಲ್ಲ?” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೊದಲ ಸಭೆಯ ಮುಕ್ತಾಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಾವು ಕೂಡ ಬೆಂಗಳೂರಿನ ಶಾಸಕರೇ ಆಗಿರುವುದರಿಂದ ಇಲ್ಲಿನ ಸ್ಥಳೀಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಆಳ ತಮಗೆ ಚೆನ್ನಾಗಿ ಗೊತ್ತಿದೆ ಎಂದರು. ಬೆಂಗಳೂರು ಕೇವಲ ನಮಗಷ್ಟೇ ಅಲ್ಲ, ಇಡೀ ದೇಶ ಮತ್ತು ಜಗತ್ತಿಗೆ ಬೇಕಾದ ಅತ್ಯಮೂಲ್ಯ ಆಸ್ತಿಯಾಗಿದ್ದು, ಇಲ್ಲಿ ವಾಸಿಸುತ್ತಿರುವ ಒಂದೂವರೆ ಕೋಟಿ ನಾಗರಿಕರ ದೈನಂದಿನ ಜೀವನವನ್ನು ಸುಧಾರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಕಸ, ರಸ್ತೆ, ಟ್ರಾಫಿಕ್ ಹಾಗೂ ನಗರದ ಸೌಂದರ್ಯೀಕರಣದ ಸವಾಲುಗಳನ್ನು ನಿಭಾಯಿಸಲು ಮತ್ತು ಆಡಳಿತವನ್ನು ಸುಲಭಗೊಳಿಸಲೇ ಏಕೈಕ ಬಿಬಿಎಂಪಿಯನ್ನು ವಿಭಜಿಸಿ ಐದು ನಗರ ಪಾಲಿಕೆಗಳನ್ನಾಗಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಡಿ.ಕೆ. ಶಿವಕುಮಾರ್ ಅವರು ನಗರದ ದೀರ್ಘಾವಧಿ ಅಭಿವೃದ್ಧಿ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ್ದಾರೆ, ಅದನ್ನು ನಾವೀಗ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು
ಕಸದ ಟೆಂಡರ್ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ
ನಗರದ ಕಸದ ವಿಲೇವಾರಿ ಸಮಸ್ಯೆಯ ಕುರಿತು ಮಾತನಾಡಿದ ಕೃಷ್ಣ ಬೈರೇಗೌಡ, ಕಸ ಮುಕ್ತ ನಗರವನ್ನಾಗಿ ಮಾಡಲು ವ್ಯವಸ್ಥೆಯ ಸುಧಾರಣೆಯ ಜೊತೆಗೆ ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ ಎಂದರು. ತಾವು ಬಂದ ತಕ್ಷಣವೇ ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಸದ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಪರಿಶೀಲಿಸಲು ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ನೀಡುವ ವರದಿ ಮತ್ತು ಸಲಹೆಗಳ ಆಧಾರದ ಮೇಲೆ ಮುಂದಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ತಮಗೆ ನೀಡಲಾಗಿರುವ ಖಾತೆಯ ಕುರಿತಾದ ಅಸಮಾಧಾನದ ಬಗ್ಗೆ ಮುಕ್ತವಾಗಿ ಮಾತನಾಡಿದ ಸಚಿವರು, “ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಸಮರ್ಪಕವಾಗಿ ಆಡಳಿತ ನಡೆಸಲು ಮತ್ತು ಜನರಿಗೆ ಸ್ಪಂದಿಸಲು ಪೂರ್ಣ ಪ್ರಮಾಣದ ಖಾತೆಯ ಜವಾಬ್ದಾರಿ ಅಗತ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಇದೇ ವಿಷಯವನ್ನು ನಾನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೆ. ಎಲ್ಲವೂ ಸಂಪೂರ್ಣವಾಗಿ ಸ್ಪಷ್ಟವಾದ ಮೇಲೆಯೇ ಕಚೇರಿಗೆ ಬರಬೇಕು ಅಂದುಕೊಂಡಿದ್ದೆ, ಆದರೆ ಮುಖ್ಯಮಂತ್ರಿಗಳು ತಮ್ಮ ವಿವೇಚನೆ ಬಳಸಿ ಸದ್ಯಕ್ಕೆ ಈ ತೀರ್ಮಾನ ಮಾಡಿದ್ದಾರೆ. ನಮ್ಮ ಅರ್ಹತೆಗೆ ತಕ್ಕ ಖಾತೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ನಂಬಿಕೆ ನನಗಿದೆ. ಸದ್ಯಕ್ಕೆ ಹಿರಿಯರ ಮತ್ತು ವರಿಷ್ಠರ ಸೂಚನೆಯನ್ನು ಗೌರವಿಸಿ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ಆರಂಭಿಸಿದ್ದೇನೆ” ಎಂದು ವಿವಾದಕ್ಕೆ ತೆರೆ ಎಳೆದರು.







