ಬೆಳ್ತಂಗಡಿ: ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ ಹಾಗೂ 27 ಗ್ರಾಂ ಗಾಂಜಾ ವಶಪಡಿಸಿಕೊಂಡು, ಒಬ್ಬ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕುವೆಟ್ಟು ನಿವಾಸಿ ತ್ವಲಹ್ ಅಲಿಯಾಸ್ ಅನ್ವರ್ ಅಲಿಯಾಸ್ ಅನ್ಸರ್ (21) ಎಂದು ಗುರುತಿಸಲಾಗಿದೆ.ಜುಲೈ 29ರ ರಾತ್ರಿ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ನೇತೃತ್ವದ ತಂಡ ಗಸ್ತು ತಿರುಗುತ್ತಿದ್ದ ವೇಳೆ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿತು. ಈ ವೇಳೆ ಆತನ ಬಳಿ 27 ಗ್ರಾಂ ಗಾಂಜಾ ಹಾಗೂ ಮೊಬೈಲ್‌ ಫೋನ್ ಪತ್ತೆಯಾಯಿತು.ನಂತರ ಸ್ಥಳದಲ್ಲಿದ್ದ ಆಟೋ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ ಪತ್ತೆಯಾಯಿತು. ಮಾದಕ ವಸ್ತು ಪೂರೈಸಲು ಬಂದಿದ್ದ ಮತ್ತೊಬ್ಬ ಆರೋಪಿ ಅಮ್ಜತ್ ಖರಾರ್ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!