ಮಂಗಳೂರು: 2015ರಲ್ಲಿ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಬಂಧಿಸಿದೆ.ಬಂಧಿತನನ್ನು ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್. (34), ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕರ್ನೇಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.2015ರಲ್ಲಿ ಮಂಗಳೂರಿನ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಕಾರ್ಯಕ್ರಮದ ವೇಳೆ ಅಶೋಕ ಕುಮಾರ ಕೊಟ್ಟಾರಿ ಮತ್ತು ಜಗ್ಗು ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಂತೋಷ್ ಸೇರಿದಂತೆ ಇತರ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ ಅಲಿಯಾಸ್ ನರೇಶ್ ಹಾಗೂ ಜಗ್ಗು ಸೇರಿ ಅಶೋಕ ಕುಮಾರ ಕೊಟ್ಟಾರಿ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 135/2015ರಂತೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾಗಿದ ಬಳಿಕ ಸಂತೋಷ್ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ನ್ಯಾಯಾಲಯವು ಎಲ್‌ಪಿಸಿ (LPC) ವಾರಂಟ್ ಹೊರಡಿಸಿತ್ತು.ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಸಿಸಿಬಿ ಅಧಿಕಾರಿಗಳಿಗೆ ಆತ ಶಿವಮೊಗ್ಗ ಭಾಗದಲ್ಲಿ ಇರುವ ಮಾಹಿತಿ ಲಭಿಸಿತ್ತು. ಅದರಂತೆ ಜುಲೈ 29ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!