ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ, ಬೆದರಿಕೆ ಹಾಗೂ ಖಾಸಗಿ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-2) ತೀರ್ಪು ನೀಡಿದೆ.ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.130/2025 ಪ್ರಕರಣದ ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ (20), ದೇವಿನಗರ, ಕುಂಜತ್ತಬೈಲ್ ನಿವಾಸಿ, ವಿರುದ್ಧದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಾನು ಕೆ.ಎಸ್. ಅವರು ಈ ಆದೇಶ ನೀಡಿದ್ದಾರೆ.ಪ್ರಕರಣದ ಪ್ರಕಾರ, ಆರೋಪಿ 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ನೆಪದಲ್ಲಿ ಪರಿಚಯಿಸಿಕೊಂಡು, 2024ರ ಸೆಪ್ಟೆಂಬರ್‌ನಲ್ಲಿ ಶಕ್ತಿನಗರದ ಚಾಲುಕ್ಯ ಬಾರ್ ಸಮೀಪದ ಬಾಡಿಗೆ ಮನೆಯಲ್ಲಿ ಹಾಗೂ ಬಳಿಕ ಅಳಪೆ ಗ್ರಾಮದ ಕೆಂಬಾರು ಕೆಇಬಿ ಎದುರಿನ ಮನೆಯಲ್ಲಿ 2025ರ ಜೂನ್‌ವರೆಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಆರೋಪಿಸಲಾಗಿತ್ತು.ಇದೇ ವೇಳೆ, ಬಾಲಕಿ ಸ್ನಾನ ಮಾಡುತ್ತಿದ್ದ ಸಂದರ್ಭ ವೀಡಿಯೊ ಕರೆ ಮಾಡಿ, ಅದರ ಸ್ಕ್ರೀನ್‌ಶಾಟ್‌ಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡು, ದೈಹಿಕ ಸಂಪರ್ಕಕ್ಕೆ ಬರದಿದ್ದರೆ ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಅಲ್ಲದೆ, ಬಾಲಕಿ, ಆಕೆಯ ತಾಯಿ ಹಾಗೂ ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದನೆಂದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.ಪ್ರಕರಣದ ತನಿಖೆಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು.ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಕಲಂ 6 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಅಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ ವಿಧಿಸಿದೆ. ಜೊತೆಗೆ, ಬಿಎನ್‌ಎಸ್ ಕಲಂ 77, ಪೋಕ್ಸೊ ಕಾಯ್ದೆಯ ಕಲಂ 15 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಕ್ಟ್) ಕಲಂ 66(E) ಅಡಿ ತಲಾ ಒಂದು ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ತೀರ್ಪು ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!