ವಿಟ್ಲ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು (ಅಂಗ್ರಿ) ಎಂಬಲ್ಲಿ ಅಡಿಕೆ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಮೃತರನ್ನು ಗೀತಾ ಎಂ ಎಂದು ಗುರುತಿಸಲಾಗಿದೆ.ಜುಲೈ 29ರಂದು ಅಸ್ವಸ್ಥಗೊಂಡಿದ್ದ ಗೀತಾ ಅವರನ್ನು ಪತಿ ಸುರೇಶ್ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಜುಲೈ 30ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಮನೆಯ ಎದುರಿನ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ.ಪತಿ ಸುರೇಶ್ ಹಾಗೂ ಸಂಬಂಧಿ ಜಯರಾಮ ನಾಯ್ಕ ಅವರು ತಕ್ಷಣ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ವೈದ್ಯರು ಬೆಳಿಗ್ಗೆ 10.04ಕ್ಕೆ ಗೀತಾ ಮೃತಪಟ್ಟಿರುವುದಾಗಿ ದೃಢಪಡಿಸಿದರು.ಹೃದಯಾಘಾತ ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ (ಯುಡಿಆರ್ ಸಂಖ್ಯೆ 26/2026) ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.









