ಉಪ್ಪಿನಂಗಡಿ: ಉಪ್ಪಿನಂಗಡಿ ಬಸ್ ನಿಲ್ದಾಣದ ಸಮೀಪದ ಬಾಬು ಪೇಪರ್ ಅಂಗಡಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಸಿಬ್ಬಂದಿಯೊಂದಿಗೆ ಜು.30ರಂದು ಸಂಜೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಂಜೆ 5.10ರ ಸುಮಾರಿಗೆ ದಾಳಿ ನಡೆಸಿದರು.ಬಂಧಿತರನ್ನು ಉಮೇಶ್ ಪೂಜಾರಿ (45), ಉರುವಾಲು, ಬೆಳ್ತಂಗಡಿ ತಾಲೂಕು ಹಾಗೂ ಸತ್ಯನಾರಾಯಣ ಪ್ರಸಾದ್ (49), ಕೋಡಿಂಬಾಡಿ ಗ್ರಾಮ, ಪುತ್ತೂರು ತಾಲೂಕು ಎಂದು ಗುರುತಿಸಲಾಗಿದೆ.ಆರೋಪಿಗಳು ಕೇರಳ ರಾಜ್ಯದ ಲಾಟರಿ ಬಂಪರ್ ಬಹುಮಾನದ ಕೊನೆಯ ಮೂರು ಅಂಕೆಗಳಿಗೆ ₹20ಕ್ಕೆ ₹12,000 ಹಾಗೂ ಎರಡು ಅಂಕೆಗಳಿಗೆ ₹20ಕ್ಕೆ ₹1,600 ಬಹುಮಾನ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದರು ಎನ್ನಲಾಗಿದೆ. ಬಳಿಕ ಚೀಟಿಯ ಫೋಟೋ ಹಾಗೂ ಹಣವನ್ನು ವಾಟ್ಸ್ಆಪ್ ಮತ್ತು ಫೋನ್‌ಪೇ ಮೂಲಕ ಮತ್ತೊಬ್ಬ ವ್ಯಕ್ತಿಗೆ ಕಳುಹಿಸಿ ಫಲಿತಾಂಶ ಪಡೆದು ಉಳಿದ ಹಣವನ್ನು ಹಂಚಿಕೊಳ್ಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ದಾಳಿ ವೇಳೆ ₹1,130 ನಗದು, ಐದು ಮಟ್ಕಾ ಚೀಟಿಗಳು ಹಾಗೂ ಒಂದು ಪೆನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112 ಜೊತೆಗೆ 3(5) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.









