ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಲು ದ.ಕ ಜಿಲ್ಲೆಯ ಒಬ್ಬರನ್ನು ರಾಜ್ಯ ಸಚಿವರನ್ನಾಗಿ ಮಾಡಬೇಕು ಎಂಬ ಆಗ್ರಹ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕೇಳಿಬಂದಿದೆ.
ಮುಂದಿನ ಸಚಿವ ಸಂಪುಟ ಪುನರ್‌ರಚನೆ ವೇಳೆ ಜಿಲ್ಲೆಯ ಜನಪ್ರತಿನಿಧಿಗಳ ಪೈಕಿ ಒಬ್ಬರನ್ನು ಮಂತ್ರಿಮಂಡಲಕ್ಕೆ ಸೇರಿಸಿ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಸ್ಥಳೀಯ ನಾಯಕರು ಒತ್ತಾಯಿಸಿದರು. ಮಾಜಿ ಮೇಯರ್ ಹರಿನಾಥ್ ಮಾತನಾಡಿ, ಶಾಸಕರಾದ ಅಶೋಕ್ ರೈ, ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅಥವಾ ಐವನ್ ಡಿಸೋಜಾ ಅವರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿದರು.
ಸ್ಥಳೀಯ ಉಸ್ತುವಾರಿ ಸಚಿವರಾದರೆ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗುವುದರ ಜೊತೆಗೆ ಪಕ್ಷ ಸಂಘಟನೆಗೂ ಬಲ ಸಿಗಲಿದೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಲಾಭವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ವೇಳೆ ಕೆಲ ಮುಖಂಡರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರು ಅಪರೂಪಕ್ಕೆ ಮಾತ್ರ ಜಿಲ್ಲೆಗೆ ಬರುತ್ತಿದ್ದು, ಪಕ್ಷ ಸಂಘಟನೆಗೆ ಅಗತ್ಯ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಪೂಜಾರಿ, ಎಂ.ಎಸ್. ಮಹಮ್ಮದ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲೆಯಿಂದ ಮಂತ್ರಿ ಸ್ಥಾನಕ್ಕಾಗಿ ವರಿಷ್ಠರ ಗಮನ ಸೆಳೆಯುವುದಾಗಿ ಪ್ರಮುಖ ನಾಯಕರು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!