ನಿಡ್ಪಳ್ಳಿ: ಹಣಕಾಸಿನ ಅಡಚಣೆಯಿಂದ ಶಾಲಾ ಪ್ರವಾಸಕ್ಕೆ ಹೋಗಲು ಸಾಧ್ಯವಾಗದ 14 ಮಂದಿ ಪುಟ್ಟ ವಿದ್ಯಾರ್ಥಿಗಳಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
‘ಟೂರ್‌ಗೆ ಹೋಗುವ ಆಸೆ ಇದೆ, ಆದರೆ ಹಣ ಇಲ್ಲದ ಕಾರಣ ಈ ಬಾರಿ ಹೋಗುವುದು ಬೇಡ ಎಂದು ಅಮ್ಮ ಹೇಳಿದ್ದಾರೆ’ ಎಂಬ ಮಕ್ಕಳ ಮಾತು ಕೇಳಿ ಭಾವುಕರಾಗಿದ್ದ ಶಾಸಕರು, ಪ್ರವಾಸಕ್ಕೆ ತೆರಳಲು ಸಾಧ್ಯವಾಗದ 14 ಮಕ್ಕಳ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ನೆರವು ಒದಗಿಸಿದ್ದಾರೆ.
ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ರೈ ಅವರು ನಿಡ್ಪಳ್ಳಿ ಗ್ರಾಮದ ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ತರಗತಿ ಕೊಠಡಿಯಲ್ಲಿ ಶಿಕ್ಷಕಿಯರು ಮಕ್ಕಳೊಂದಿಗೆ ಶಾಲಾ ಪ್ರವಾಸದ ಕುರಿತು ಚರ್ಚಿಸುತ್ತಿದ್ದರು. ತರಗತಿಗೆ ತೆರಳಿದ ಶಾಸಕರು ಮಕ್ಕಳೊಂದಿಗೆ ಕುಳಿತು ಪ್ರವಾಸದ ಬಗ್ಗೆ ವಿಚಾರಿಸಿದ್ದರು.

ಈ ಸಂದರ್ಭದಲ್ಲಿ ಯಾರೆಲ್ಲ ಪ್ರವಾಸಕ್ಕೆ ಬರುತ್ತೀರಿ ಎಂದು ಶಾಸಕರು ಪ್ರಶ್ನಿಸಿದಾಗ, 14 ಮಕ್ಕಳು ಪ್ರವಾಸಕ್ಕೆ ಬರುತ್ತಿಲ್ಲ ಎಂಬ ವಿಷಯವನ್ನು ಶಿಕ್ಷಕಿ ತಿಳಿಸಿದ್ದರು. ಇದಕ್ಕೆ ಕಾರಣವೇನು ಎಂದು ಮಕ್ಕಳಲ್ಲಿ ಕೇಳಿದಾಗ, ಹಣಕಾಸಿನ ತೊಂದರೆಯಿಂದಾಗಿ ಅಮ್ಮ ಪ್ರವಾಸಕ್ಕೆ ಹೋಗುವುದು ಬೇಡ ಎಂದು ಹೇಳಿದ್ದಾರೆ ಎಂದು ಮಕ್ಕಳು ಮುಗ್ಧವಾಗಿ ಉತ್ತರಿಸಿದ್ದರು.
ಪುಟ್ಟ ಮಕ್ಕಳ ಮಾತು ಕೇಳಿ ಭಾವುಕರಾದ ಶಾಸಕರು, ಆರ್ಥಿಕ ಅಡಚಣೆಯಿಂದ ಪ್ರವಾಸದಿಂದ ವಂಚಿತರಾಗುತ್ತಿದ್ದ 14 ಮಕ್ಕಳ ಪ್ರವಾಸದ ವೆಚ್ಚವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸೋಮವಾರ ಶಿಕ್ಷಕಿ ಶಾಸಕರ ಕಚೇರಿಗೆ ಭೇಟಿ ನೀಡಿದ್ದು, ಶಾಸಕರು ನೀಡಿದ ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಇದರಿಂದಾಗಿ ಹಣಕಾಸಿನ ತೊಂದರೆಯಿಂದ ಶಾಲಾ ಪ್ರವಾಸದಿಂದ ವಂಚಿತರಾಗುತ್ತಿದ್ದ 14 ಮಂದಿ ಮಕ್ಕಳಿಗೂ ಪ್ರವಾಸಕ್ಕೆ ತೆರಳುವ ಅವಕಾಶ ಲಭಿಸಿದೆ.
ಮಕ್ಕಳ ಪುಟ್ಟ ಆಸೆಗೆ ಸ್ಪಂದಿಸಿ, ಕೊಟ್ಟ ಮಾತನ್ನು ಉಳಿಸಿಕೊಂಡ ಶಾಸಕ ಅಶೋಕ್ ರೈ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!