ಮಂಗಳೂರು: ಕೆಲಸದ ಹಣದ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2020ರ ನವೆಂಬರ್ 3ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ ಘಟನೆ ನಡೆದಿತ್ತು. ಕೆಲಸ ಮಾಡಿದ ಹಣವನ್ನು ನೀಡಿಲ್ಲ ಎಂಬ ಕಾರಣಕ್ಕೆ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಸುರೇಂದ್ರನ್ ಅವರ ಮನೆಗೆ ತೆರಳಿದ್ದ.
ಈ ವೇಳೆ ಎರಡನೇ ಆರೋಪಿಯ ಪ್ರೇರಣೆಯಿಂದ ಮೊದಲನೇ ಆರೋಪಿ ಸಂತೋಷ್ ಮನೆಯೊಳಗೆ ತೆರಳಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಪೇಪರ್ ಕತ್ತರಿಸುವ ಬ್ಲೇಡ್ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಇರಿದು, ವ್ಯಾಯಾಮದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಆರೋಪಿಗಳಾದ ಸಂತು ಅಲಿಯಾಸ್ ಸಂತೋಷ್ ಮತ್ತು ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಎಸ್ಸಿ ನಂ. 77/2022ರ ಪ್ರಕರಣದಲ್ಲಿ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿದ್ದು, ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.
ಶಿಕ್ಷೆಯ ವಿವರ
ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ ₹25,000 ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
ಐಪಿಸಿ ಕಲಂ 392 (ದರೋಡೆ): 2 ವರ್ಷಗಳ ಕಾರಾವಾಸ ಹಾಗೂ ₹5,000 ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
ಐಪಿಸಿ ಕಲಂ 201 (ಸಾಕ್ಷ್ಯ ನಾಶ): 6 ತಿಂಗಳ ಕಾರಾವಾಸ ಹಾಗೂ ₹2,000 ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.
ಒಟ್ಟು ₹32,000 ದಂಡದ ಪೈಕಿ ₹7,000 ಸರಕಾರಕ್ಕೆ ಹಾಗೂ ₹25,000 ಮೊತ್ತವನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.








