ಪುತ್ತೂರು: ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ 5ನೇ ಕರ್ನಾಟಕ ಮಿನಿ ಒಲಿಂಪಿಕ್ಸ್ ಪಂದ್ಯಕೂಟದಲ್ಲಿ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಬೆಥನಿ ಆಂಗ್ಲ ಮಾಧ್ಯಮ ಶಾಲೆ, ದರ್ಬೆಯ ವಿದ್ಯಾರ್ಥಿನಿ ಹಾರ್ದಿಕ ಪಿ. ನಾಯಕತ್ವದ ದಕ್ಷಿಣ ಕನ್ನಡ ಜಿಲ್ಲಾ ತಂಡ ಸತತ ಐದು ಪಂದ್ಯಗಳನ್ನು ಹೆಚ್ಚಿನ ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಕೂಟದಲ್ಲಿ ಅಜೇಯ ಸಾಧನೆ ಮಾಡಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್, ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತಂಡದ ಮಾಜಿ ನಾಯಕ, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಹಾಗೂ ತರಬೇತುದಾರ ಅಬ್ದುಲ್ ಆಸೀಫ್ ಮತ್ತು ಕಬಡ್ಡಿ ತರಬೇತುದಾರ ಪ್ರಸಾದ್ ಕೊಣಾಜೆ ತರಬೇತಿ ನೀಡಿದ್ದರು.
ಹಾರ್ದಿಕ ಆಟಕ್ಕೆ ಪ್ರೇಕ್ಷಕರ ಮೆಚ್ಚುಗೆ
ತಂಡದ ನಾಯಕಿ ಹಾರ್ದಿಕ ಪಿ. ಅವರ ಆಟ ಪಂದ್ಯಕೂಟದಲ್ಲಿ ಕಬಡ್ಡಿ ಅಭಿಮಾನಿಗಳ ವಿಶೇಷ ಗಮನ ಸೆಳೆಯಿತು. ಶಿಕ್ಷಣ ಇಲಾಖೆಯ ಪಂದ್ಯಾಟಗಳಲ್ಲಿ ಸತತ ಮೂರನೇ ಬಾರಿಗೆ ರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿರುವ ಹಾರ್ದಿಕ, ಈ ಕೂಟದ ಐದು ಪಂದ್ಯಗಳಲ್ಲಿ ವೈಯಕ್ತಿಕವಾಗಿ 120ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಗಮನ ಸೆಳೆದರು.
ತಮ್ಮ ಸೈಡ್ ಜಂಪ್, ಟೋ ಟಚ್ ಹಾಗೂ ರೋಲ್ ಆಟದ ಮೂಲಕ ಎದುರಾಳಿ ತಂಡಗಳಿಗೆ ಸವಾಲೊಡ್ಡಿದ ಹಾರ್ದಿಕ ಅವರ ಆಟಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಟೀಮ್ ಇಂಡಿಯಾ ಆಟಗಾರ್ತಿ ಕಾರ್ತಿಕಾ ಅವರ ಆಟವನ್ನು ನೆನಪಿಸುವ ರೀತಿಯಲ್ಲಿ ಆಡಿದ ಹಾರ್ದಿಕ ಅವರನ್ನು ಪ್ರೇಕ್ಷಕರು ‘ಜೂನಿಯರ್ ಕಾರ್ತಿಕಾ’ ಎಂದು ಕರೆದು ಹುರಿದುಂಬಿಸಿದರು.
ಫೈನಲ್ ಪಂದ್ಯದಲ್ಲಿ ಹಾರ್ದಿಕ ಅವರ ಆಟವನ್ನು ವೀಕ್ಷಿಸಲು ಹಲವು ಅಭಿಮಾನಿಗಳು ಆಗಮಿಸಿದ್ದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಾರ್ದಿಕ ಅವರ ಸರ್ವಾಂಗೀಣ ಆಟ ಪಂದ್ಯಕೂಟದ ಪ್ರಮುಖ ಆಕರ್ಷಣೆಯಾಗಿತ್ತು.









