ಉಳ್ಳಾಲ: ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಯೊಬ್ಬರನ್ನು ಬಲವಂತವಾಗಿ ಕರೆದೊಯ್ದ ಘಟನೆ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಕಾಲೇಜಿನ ಡೀನ್ ಡಾ. ಶಾನವಾಝ್ ಮಾನಿಪ್ಪಾಡಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿನಿಯ ಅಪಹರಣ ನಡೆದಿಲ್ಲ. ಆಕೆಯ ಸಂಬಂಧಿಕರೇ ಕರೆದೊಯ್ದಿದ್ದು, ಈ ವಿಚಾರ ವಿದ್ಯಾರ್ಥಿನಿಗೂ ಹಾಗೂ ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳಿಗೂ ತಿಳಿದಿತ್ತು ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಇತ್ತೀಚೆಗೆ ವಿದ್ಯಾಭ್ಯಾಸದ ಕಡೆಗೆ ಸರಿಯಾಗಿ ಗಮನ ಹರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಆಕೆಯ ಪೋಷಕರು ಕಾಲೇಜಿಗೆ ಬಂದು ವಿಚಾರಿಸಿದ್ದರು. ಅಂದು ವಿದ್ಯಾರ್ಥಿನಿ ತರಗತಿಗೆ ಹಾಜರಾಗದೆ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ ಪೋಷಕರ ವಿರುದ್ಧವೇ ದೂರು ನೀಡಿದ್ದಳು. ಅಲ್ಲದೆ, ವಿದ್ಯಾರ್ಥಿನಿ ಕಾಲೇಜಿನ ಹಾಸ್ಟೆಲ್‌ಗೆ ಬಾರದಿರುವುದನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿತ್ತು. ಮರುದಿನ ಪೊಲೀಸರು ವಿದ್ಯಾರ್ಥಿನಿಯನ್ನು ಕರೆತಂದು ಪೋಷಕರ ಸಮಕ್ಷಮದಲ್ಲಿ ಹಾಸ್ಟೆಲ್‌ಗೆ ಬಿಟ್ಟಿದ್ದರು.
ಗುರುವಾರ ಮತ್ತೆ ಕಾಲೇಜಿಗೆ ಬಂದಿದ್ದ ಪೋಷಕರು ವಿದ್ಯಾರ್ಥಿನಿಯನ್ನು ಸ್ವಲ್ಪ ಬಲವಂತವಾಗಿಯೇ ಕರೆದೊಯ್ದಿದ್ದಾರೆ. ಆಕೆಯನ್ನು ಕರೆದೊಯ್ಯುತ್ತಿರುವವರು ಪೋಷಕರೇ ಎಂಬುದು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ತಿಳಿದಿತ್ತು. ಹೀಗಾಗಿ ಯಾರೂ ಅದನ್ನು ವಿರೋಧಿಸಿರಲಿಲ್ಲ. ಆದರೆ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ಸಂಸ್ಥೆಯ ಘನತೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆಧಾರರಹಿತ ವರದಿಗಳು ಮತ್ತು ಪೋಸ್ಟ್‌ಗಳನ್ನು ಪ್ರಕಟಿಸಬಾರದು. ಈಗಾಗಲೇ ಹರಿದಾಡುತ್ತಿರುವ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಎಂದು ಶಾನವಾಝ್ ಮನವಿ ಮಾಡಿದರು.
ವಿದ್ಯಾರ್ಥಿನಿಯನ್ನು ಕರೆದೊಯ್ಯುವ ಸಂದರ್ಭದಲ್ಲಿ ಆಕೆಯ ತಂದೆ, ತಾಯಿ, ತಂಗಿ, ತಮ್ಮ ಹಾಗೂ ಅಂಕಲ್ ಉಪಸ್ಥಿತರಿದ್ದರು. ಹೊರಗಿನವರು ಕಾಲೇಜು ಕ್ಯಾಂಪಸ್‌ಗೆ ಬಂದು ವಿದ್ಯಾರ್ಥಿನಿಯನ್ನು ಅಪಹರಿಸುವುದು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಯುವತಿ ಪ್ರಾಪ್ತವಯಸ್ಕಳಾಗಿರಬಹುದು. ಆದರೆ, ಭಾರತೀಯ ಸಂಸ್ಕೃತಿಯ ಪ್ರಕಾರ ಪೋಷಕರಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಹಕ್ಕಿದೆ. ಆಕೆ ತಪ್ಪು ದಾರಿ ಹಿಡಿದಿದ್ದಾಳೆ ಎಂಬ ಕಾರಣಕ್ಕೆ ಪೋಷಕರು ಬಲವಂತ ಮಾಡಿರಬಹುದು. ಇದನ್ನು ಅಪಹರಣ ಎಂದು ಪರಿಗಣಿಸಬಾರದು ಎಂದು ಅವರು ಸಮರ್ಥಿಸಿಕೊಂಡರು.
ವಿದ್ಯಾರ್ಥಿನಿಯನ್ನು ಪೋಷಕರು ಕರೆದೊಯ್ದ ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿತ್ತು. ಈ ಕುರಿತು ಪೊಲೀಸರು ಸ್ವೀಕೃತಿ ಪತ್ರವನ್ನೂ ಕಳುಹಿಸಿದ್ದಾರೆ ಎಂದರು









