ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾರುಗದ್ದೆಯಲ್ಲಿ ಡಿ.8ರಂದು ನಡೆಯಲಿರುವ ಪುತ್ತೂರು ದೀಪೋತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಈ ಪ್ರಯುಕ್ತ ನ.25ರಂದು ದೀಪೋತ್ಸವ ಸಮಿತಿಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ದೀಪೋತ್ಸವ ಸಮಿತಿ (ರಿ.) ವತಿಯಿಂದ ಸಮಸ್ತ ಹಿಂದೂ ಬಾಂಧವರ ಸಹಭಾಗಿತ್ವದಲ್ಲಿ ಡಿ.8ರ ಮಂಗಳವಾರ ದಿನಪೂರ್ತಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತಿ ಪೂರ್ವಕವಾಗಿ ದೀಪೋತ್ಸವ ಸಮರ್ಪಿಸಲು ಸಿದ್ಧತೆ ನಡೆಸಲಾಗಿದೆ.
ದೀಪೋತ್ಸವದ ಪೂರ್ವಭಾವಿಯಾಗಿ ನ.25ರ ಬುಧವಾರ ಮಧ್ಯಾಹ್ನ 12.10ರ ಶುಭ ಮುಹೂರ್ತದಲ್ಲಿ ಕಚೇರಿ ಉದ್ಘಾಟನೆ ನಡೆಯಲಿದೆ. ಕಟೀಲು ಲಾಜಿಸ್ಟಿಕ್ಸ್‌ನ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ ಅವರು ಕಚೇರಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ರಾಧಾಸ್ ಸಂಸ್ಥೆಯ ಮಾಲಕ ಪ್ರಕಾಶ್ ಕಾಮತ್, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಗುತ್ತು ಹಾಗೂ ದರ್ಬೆಯ ಕಾರ್ತಿಕ್ ಮೆಡಿಕಲ್‌ನ ವೇಣುಗೋಪಾಲ ಪಿ.ಎಲ್. ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಎ.ಜಿ.ಎಂ. ಜಗಜೀವನದಾಸ್ ರೈ, ವಿಜಯ ಬ್ಯಾಂಕ್‌ನ ವಿಶ್ರಾಂತ ಪ್ರಬಂಧಕ ಜೈರಾಜ್ ಭಂಡಾರಿ ನೋಣಾಲ್ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರವೀಂದ್ರನಾಥ್ ರೈ ಬಳ್ಳಮಜಲು ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೆ ಪುತ್ತೂರು ದೀಪೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.









