
ತೆಲಂಗಾಣದ ನಂತರ ರಾಜ್ಯದಲ್ಲಿಯೂ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆಯುತ್ತಿದೆ.
ವಿಧಾನಸಭೆಯಲ್ಲಿ ಮಕ್ಕಳ ಜಾಲತಾಣ ಬಳಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಡಿಜಿಟಲ್ ಡಿಟಾಕ್ಸಿಫಿಕೇಶನ್ ಗೆ ಮುಂದಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಸಣ್ಣ ಮಕ್ಕಳು ಜಾಲತಾಣಗಳಲ್ಲಿ ಅನಗತ್ಯ ವಿಚಾರ ನೋಡುತ್ತಾ ಆಕರ್ಷಿತರಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಸುರೇಶ್ ಕುಮಾರ್ ಅವರು ಗಂಭೀರ ವಿಚಾರ ಪ್ರಸ್ತಾಪಿಸಿದ್ದಾರೆ. ಮಕ್ಕಳನ್ನು ಜಾಲತಾಣದಿಂದ ದೂರ ಇಡುವ ಬಗ್ಗೆ ಫಿನ್ಲೆಂಡ್, ಆಸ್ಟ್ರೇಲಿಯಾ, ಫ್ರಾನ್ಸ್ ಈಗಾಗಲೇ ನಿರ್ಧಾರ ಕೈಗೊಂಡಿವೆ. ನಾವು ಕೂಡ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಜವಾಬ್ದಾರಿಯುತ ಬಳಕೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಮುಳುಗುತ್ತಿರುವುದು ಆತಂಕಕಾರಿ. ಈಗಾಗಲೇ ಕೆಲವು ದೇಶಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆಗೆ ಕಡಿವಾಣ ಹಾಕುವ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನಾವು ಕೂಡ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತಿದ್ದೇವೆ. ಸೋಷಿಯಲ್ ಮೀಡಿಯಾದಿಂದ ಅವರನ್ನು ಹೊರತರಲು ಐಟಿಬಿಟಿ ಇಲಾಖೆಯು ಮೆಟಾ ಸಹಯೋಗದಲ್ಲಿ ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಹೆಚ್ಚು ಮಕ್ಕಳು, ಸುಮಾರು 1 ಲಕ್ಷ ಶಿಕ್ಷಕರು ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣವನ್ನು ಅಗತ್ಯಗಿಂತ ಹೆಚ್ಚು ಬಳಸಿದರೆ ಭವಿಷ್ಯಕ್ಕೆ ಮಾರಕವಾಗಲಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.






