ಬಂಟ್ವಾಳ: ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ, ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜುಲೈ 2ರ ಸಂಜೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ವೇಳೆ, ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.ಸ್ಥಳ ಪರಿಶೀಲನೆ ವೇಳೆ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿರುವುದು, ಅದಕ್ಕೆ ಬಳಸುತ್ತಿದ್ದ ಯಂತ್ರೋಪಕರಣಗಳು ಹಾಗೂ ಸಮೀಪದಲ್ಲೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಮಣ್ಣು ಸಾಗಣೆ ಲಾರಿಗಳ ತೂಕ ಮಾಪನಕ್ಕಾಗಿ ನಿರ್ಮಿಸಿದ್ದ ವೇಬ್ರಿಡ್ಜ್ ಹಾಗೂ ಕಟ್ಟಡವೂ ಪತ್ತೆಯಾಗಿದ್ದು, ಸಂಬಂಧಿತ ಯಂತ್ರೋಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಮುಳಿಗದ್ದೆ ಝಕಾರಿಯಾ ಹಾಗೂ ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಭಾರತೀಯ ನ್ಯಾಯ ಸಂಹಿತೆ (BNS), ಎಂಎಂಡಿಆರ್ ಕಾಯ್ದೆ ಹಾಗೂ ಕರ್ನಾಟಕ ಕಿರು ಖನಿಜ ನಿಯಮಾವಳಿಗಳ ವಿವಿಧ ಕಲಂಗಳಡಿ ತನಿಖೆ ಮುಂದುವರಿಸಲಾಗಿದೆ.







