ಮಂಗಳೂರು: ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ ಹಣದ ವಹಿವಾಟಿಗೆ ಸಹಕರಿಸಿದ್ದ ಆರೋಪದಡಿ ಕೊಳ್ನಾಡು ಕುಡ್ತಮುಗೇರು ನಿವಾಸಿ ಜುಬೈರ್ (32) ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ.104/2025 ಪ್ರಕರಣದ (ಐಟಿ ಕಾಯ್ದೆ ಸೆಕ್ಷನ್ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು) ತನಿಖೆಯ ವೇಳೆ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಪೊಲೀಸರ ವಿಚಾರಣೆಯಲ್ಲಿ, ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಅ.ಕ್ರ.180/2022 ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು ಎಂಬುದೂ ತನಿಖೆಯಲ್ಲಿ ತಿಳಿದುಬಂದಿದೆ.







