ಪುತ್ತೂರು: ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಬಿ.ಟಿ. ರಂಜನ್ ಅವರ ಸ್ಮರಣೆಯಲ್ಲಿ ಅತ್ಯುತ್ತಮ ಪತ್ರಿಕಾ ವರದಿಗೆ ಈ ವರ್ಷದಿಂದ ವಾರ್ಷಿಕ ಪ್ರಶಸ್ತಿ ನೀಡಲು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ.ಜುಲೈ 18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಉಪವಿಭಾಗ ಮಟ್ಟದ ಆಯ್ಕೆ:ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸೇರಿದ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು 2025ರ ಜನವರಿ 1ರಿಂದ ಅದೇ ವರ್ಷದ ಡಿಸೆಂಬರ್ 31ರ ಅವಧಿಯಲ್ಲಿ ಪತ್ರಿಕೆಗಳಲ್ಲಿ ಬರೆದಿರುವ ಅತ್ಯುತ್ತಮ ಮಾನವಾಸಕ್ತಿಯ ವರದಿಗಳಲ್ಲಿ ಆಯ್ಕೆ ಮಾಡಿ ಒಬ್ಬ ವರದಿಗಾರನಿಗೆ ಬಿ.ಟಿ. ರಂಜನ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಾಲ್ಕು ತಾಲೂಕುಗಳ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಆಯಾ ತಾಲೂಕುಗಳ ಕಾರ್ಯನಿರತ ಪತ್ರಕರ್ತರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2025ರಲ್ಲಿ ಪ್ರಕಟವಾದ, ತಮ್ಮ ಬೈಲೈನ್ ಹೊಂದಿರುವ ಮಾನವಾಸಕ್ತಿಯ ವರದಿಗಳ 2 ಪ್ರತಿಗಳನ್ನು ವರದಿಗಾರರು ತಮ್ಮ ತಾಲೂಕು ಸಂಘದ ದೃಢೀಕರಣ ಪತ್ರದೊಂದಿಗೆ ಜುಲೈ 11ರ ಒಳಗೆ –ಅಧ್ಯಕ್ಷರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ ಘಟಕ), ಪತ್ರಿಕಾ ಭವನ, ಪುತ್ತೂರು ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. ಒಬ್ಬ ವರದಿಗಾರ ಒಂದಕ್ಕಿಂತ ಹೆಚ್ಚು ವರದಿಗಳ ಪ್ರತಿಗಳನ್ನು ಕಳಿಸಬಹುದು.ಪ್ರಶಸ್ತಿಗೆ ಬಂದ ಮಾನವಾಸಕ್ತಿಯ ವರದಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಒಂದು ಅತ್ಯುತ್ತಮ ವರದಿಯನ್ನು 2026ನೇ ಸಾಲಿನ ಬಿ.ಟಿ. ರಂಜನ್ ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ಜು.18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪುತ್ತೂರು ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಬಿ.ಟಿ.ರಂಜನ್:

ಸುಮಾರು 4 ದಶಕಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಬಿ.ಟಿ. ರಂಜನ್ ಅವರು ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮಂಗಳೂರು ಮಿತ್ರ, ಮುಂಗಾರು, ಉದಯವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಮಾಧ್ಯಮ ಗೌರವ ಸೇರಿದಂತೆ ಅನೇಕ ಪುರಸ್ಕಾರಗಳು ಇವರಿಗೆ ಸಂದಿದ್ದವು. 2022ರ ಫೆ.5ರಂದು ಇವರು ನಿಧನರಾಗಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿ ಬಿ.ಟಿ. ರಂಜನ್ ವಹಿಸಿದ ನೇತೃತ್ವ ಮತ್ತು ಪತ್ರಿಕಾ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಯ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಬಿ.ಟಿ. ರಂಜನ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!