ಪುತ್ತೂರು: ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಅವರ ಸ್ಮರಣಾರ್ಥ ಅತ್ಯುತ್ತಮ ಮಾನವಾಸಕ್ತಿಯ ಪತ್ರಿಕಾ ವರದಿಗೆ ಈ ವರ್ಷದಿಂದ ವಾರ್ಷಿಕ ‘ಬಿ.ಟಿ. ರಂಜನ್ ಪ್ರಶಸ್ತಿ’ ನೀಡಲು ಸಂಘ ನಿರ್ಧರಿಸಿದೆ.ಪುತ್ತೂರು ಪತ್ರಿಕಾ ಭವನದಲ್ಲಿ ಜುಲೈ 18ರಂದು ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು 2025ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಬೈಲೈನ್ ಹೊಂದಿರುವ ಮಾನವಾಸಕ್ತಿಯ ವರದಿಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು.ವರದಿಗಳ ಎರಡು ಪ್ರತಿಗಳನ್ನು ಸಂಬಂಧಿತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದೃಢೀಕರಣ ಪತ್ರದೊಂದಿಗೆ ಜುಲೈ 11ರೊಳಗೆ ಅಧ್ಯಕ್ಷರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ ಘಟಕ), ಪತ್ರಿಕಾ ಭವನ, ಪುತ್ತೂರು ವಿಳಾಸಕ್ಕೆ ಕಳುಹಿಸಬೇಕು. ಒಬ್ಬ ಪತ್ರಕರ್ತರು ಒಂದಕ್ಕಿಂತ ಹೆಚ್ಚು ವರದಿಗಳನ್ನು ಸಲ್ಲಿಸಲು ಅವಕಾಶವಿದೆ.ಸಲ್ಲಿಕೆಯಾದ ವರದಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ 2026ನೇ ಸಾಲಿನ ಬಿ.ಟಿ. ರಂಜನ್ ಪ್ರಶಸ್ತಿಗೆ ಒಂದು ಅತ್ಯುತ್ತಮ ವರದಿಯನ್ನು ಆಯ್ಕೆ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಬಿ.ಟಿ. ರಂಜನ್: ಉಪ್ಪಿನಂಗಡಿಯವರಾದ ಬಿ.ಟಿ. ರಂಜನ್ ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ಮಂಗಳೂರು ಮಿತ್ರ, ಮುಂಗಾರು, ಉದಯವಾಣಿ ಹಾಗೂ ಹೊಸದಿಗಂತ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಡಾ. ಶಿವರಾಮ ಕಾರಂತ ಬಾಲವನ ಮಾಧ್ಯಮ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2022ರ ಫೆಬ್ರುವರಿ 5ರಂದು ಅವರು ನಿಧನರಾಗಿದ್ದರು.ಅವರ ನಾಯಕತ್ವ ಹಾಗೂ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಸ್ಮರಿಸಿ, ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸಲು ಸಂಘ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!