ಪುತ್ತೂರು, ಆ.19: ಕರಾವಳಿ ಮೀನುಗಾರರ ಸುರಕ್ಷತೆಯ ವಿಚಾರದಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.ಆ.18ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಸುರಕ್ಷತೆ ಹಾಗೂ ಲೈಫ್ ಜಾಕೆಟ್ ವಿತರಣೆಗೆ ಸಂಬಂಧಿಸಿದಂತೆ ಅವರು ಕೇಳಿದ ಲಿಖಿತ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರವನ್ನು ಆಧರಿಸಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 215 ಮೀನುಗಾರರು ಮೃತಪಟ್ಟಿದ್ದಾರೆ. ಆದರೆ ಹಲವು ಸಂದರ್ಭಗಳಲ್ಲಿ ಲೈಫ್ ಜಾಕೆಟ್ ವಿತರಣೆ ಶೂನ್ಯವಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.2025-26ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 57 ಮೀನುಗಾರರು ಮೃತಪಟ್ಟಿದ್ದರೂ, ಆ ವರ್ಷ ವಿತರಿಸಲಾದ ಲೈಫ್ ಜಾಕೆಟ್‌ಗಳ ಸಂಖ್ಯೆ ಶೂನ್ಯ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ ಒಟ್ಟು ಎಂಟು ಮೀನುಗಾರರು ಅಪಘಾತದಲ್ಲಿ ಮೃತಪಟ್ಟಿದ್ದು, ಈ ಎರಡೂ ವರ್ಷಗಳಲ್ಲಿ ಲೈಫ್ ಜಾಕೆಟ್ ವಿತರಣೆ ಶೂನ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.ಉಡುಪಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 90 ಮೀನುಗಾರರು ಮೃತಪಟ್ಟಿದ್ದು, ಕ್ರಮವಾಗಿ 180, 170 ಮತ್ತು 193 ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯಗೊಳಿಸುವ ಸರ್ಕಾರ, ಅದೇ ಮೀನುಗಾರರಿಗೆ ಅಗತ್ಯ ರಕ್ಷಣಾ ಪರಿಕರಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಸಾವುಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲೇ ಲೈಫ್ ಜಾಕೆಟ್ ವಿತರಣೆ ಶೂನ್ಯವಾಗಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇವಲ ಕಾಗದದ ಮೇಲೆ ₹604 ಲಕ್ಷ ಅನುದಾನ ಮೀಸಲಿಟ್ಟಿರುವುದಾಗಿ ಹೇಳಿಕೊಳ್ಳದೆ, ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರಿಗೆ ಅಗತ್ಯ ಪ್ರಮಾಣದಲ್ಲಿ ತಕ್ಷಣ ಲೈಫ್ ಜಾಕೆಟ್‌ಗಳನ್ನು ಒದಗಿಸಬೇಕು. ಮೀನುಗಾರರ ಜೀವಕ್ಕೆ ಬೆಲೆ ನೀಡುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!