ಪುತ್ತೂರು: ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಫ್ಯಾಸಿಸಂ ದೊಡ್ಡ ಬೆದರಿಕೆಯಾಗಿದ್ದು, ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವ ಶಕ್ತಿಗಳನ್ನು ಸಂಪೂರ್ಣವಾಗಿ ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಹೇಳಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬನ್ನೂರು ಜಂಕ್ಷನ್‌ನಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ನ್ಯಾಯವನ್ನು ಒದಗಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದ ಮೂಲಕ ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಜನರ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು.
ಫ್ಯಾಸಿಸಂ ವಿರುದ್ಧ ಸಂಘಟಿತ ಹೋರಾಟ ಇಂದಿನ ತುರ್ತು ಅಗತ್ಯವಾಗಿದ್ದು, ಸಾಮಾಜಿಕ ನ್ಯಾಯದ ಹಾದಿಯಲ್ಲಿ ಎಸ್‌ಡಿಪಿಐ ಸದಾ ಮುಂಚೂಣಿಯಲ್ಲಿದೆ. ಪ್ರಜಾಪ್ರಭುತ್ವವನ್ನು ಉಳಿಸಿ, ಫ್ಯಾಸಿಸಂ ಮುಕ್ತ ಭಾರತ ನಿರ್ಮಿಸಲು ಕಾರ್ಯಕರ್ತರು ಜನಸಾಮಾನ್ಯರೊಂದಿಗೆ ಕೈಜೋಡಿಸಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಮಾತನಾಡಿ, ಗಣರಾಜ್ಯದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ತಳಮಟ್ಟದಲ್ಲಿ ಉಳಿಸುವಲ್ಲಿ ಪ್ರಾದೇಶಿಕ ಸಮಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪುತ್ತೂರು ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶ್ರಫ್ ತಲಪಾಡಿ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಪುತ್ತೂರು ನಗರಸಭೆ ಸದಸ್ಯೆ ಝೊಹರಾ ಬನ್ನೂರು, ನಗರ ಸಮಿತಿ ಉಪಾಧ್ಯಕ್ಷ ಶಮೀರ್ ನಾಜೂಕು, ಬನ್ನೂರು ಹನಫೀ ಮಸೀದಿಯ ಧರ್ಮಗುರು ಶೇಖ್ ಹಜ್ರತ್ ರಜಬ್ ಸಾಹೇಬ್, ಅಶ್ರಫ್ ಹಾರಾಡಿ (ಕಾರ್ಯದರ್ಶಿ, ಬನ್ನೂರು ಜುಮಾ ಮಸೀದಿ), ನಿಝಾಂ ಹಾರಾಡಿ (ಉಪಾಧ್ಯಕ್ಷ, ಸಿಲ್–ಸಿಲಾ ವೆಲ್ಫೇರ್ ಅಸೋಸಿಯೇಷನ್), ನಾಸಿರ್ ಈಗಲ್ (ಉಪಾಧ್ಯಕ್ಷ, ದಖೀರತುಲ್ ಉಖ್ರಾ ಯಂಗ್‌ಮೆನ್ಸ್ ಅಸೋಸಿಯೇಷನ್), ಫವಾಝ್ ಬನ್ನೂರು (ವಾರ್ಡ್ ಸಮಿತಿ ಅಧ್ಯಕ್ಷ) ಸೇರಿದಂತೆ ವಿವಿಧ ಕ್ಷೇತ್ರ ಮತ್ತು ಬ್ಲಾಕ್ ಸಮಿತಿಗಳ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ನಿಷಾದ್ ಡಿ.ಕೆ ಸ್ವಾಗತಿಸಿದರು. ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹೀಂ ಪುತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!