

ಮಂಗಳೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಜನವರಿ 24ರಿಂದ 25ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುವ ನಿರೀಕ್ಷೆಯಿದೆ.
ಪುತ್ತೂರು ನಗರ ಠಾಣಾ ಸರಹದ್ದು ಮತೀಯವಾಗಿ ಅತಿಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಆದೇಶ ಹೊರಡಿಸಿದ್ದಾರೆ. ಅದರಂತೆ, ಕಂಬಳ ನಡೆಯುವ ಅವಧಿಯಲ್ಲಿ ಜನಸಂದಣಿ ಸೇರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹಾಗೂ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಅಶಾಂತಿ ಉಂಟುಮಾಡುವುದನ್ನು ತಪ್ಪಿಸಲು, ಪುತ್ತೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಬಾರ್‌ಗಳು, ವೈನ್‌ಶಾಪ್‌ಗಳು ಹಾಗೂ ಮದ್ಯ ಅಂಗಡಿಗಳನ್ನು ಜನವರಿ 24ರಂದು ಬೆಳಿಗ್ಗೆ 6 ಗಂಟೆಯಿಂದ 25ರ ರಾತ್ರಿ 12 ಗಂಟೆಯವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಅಮಲು ಪದಾರ್ಥಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.





