ಪುತ್ತೂರು: ಬಂಟ್ವಾಳ ತಾಲೂಕಿನ ಶ್ರೀಧಾಮ ಮಾಣಿಲದ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 27ನೇ ವರ್ಷದ 48 ದಿನಗಳ ಶ್ರೀ ಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ, ಪುತ್ತೂರಿನ ಭಕ್ತಾದಿಗಳಿಂದ ಆ.9ರಂದು ‘ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದರು.ಪುತ್ತೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 12ರಿಂದ ಆ.28ರವರೆಗೆ ಒಂದು ಮಂಡಲದ ಅವಧಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿವೆ. ಇದರ ಅಂಗವಾಗಿ ಆ.9ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ವಾಹನಗಳಲ್ಲಿ ಬೃಹತ್ ಹೊರೆಕಾಣಿಕೆ ಮೆರವಣಿಗೆ ಮಾಣಿಲ ಶ್ರೀ ಕ್ಷೇತ್ರದತ್ತ ಹೊರಡಲಿದೆ ಎಂದರು.ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಪುಣ್ಯಪ್ರದಾಯಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪುತ್ತೂರಿನ ಭಕ್ತರಿಗೆ ದೊರೆತಿದೆ. ಶ್ರೀ ಕ್ಷೇತ್ರದ 25ನೇ ವರ್ಷದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಪುತ್ತೂರಿನಿಂದ ಸಮರ್ಪಿಸಲಾದ ಹೊರೆಕಾಣಿಕೆಗೆ ಉತ್ತಮ ಸ್ಪಂದನೆ ದೊರೆತಿತ್ತು. ಈ ಬಾರಿಯೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಸಿರುವಾಣಿ ಹೊರೆಕಾಣಿಕೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಹೊರೆಕಾಣಿಕೆ ಸಂಗ್ರಹಣಾ ಕಚೇರಿಯು ಆ.6ರ ಬೆಳಿಗ್ಗೆಯಿಂದ ಆ.9ರ ಬೆಳಿಗ್ಗೆಯವರೆಗೆ ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಸುರೇಶ್ ಮತ್ತೂರಾಯ, ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಅಧ್ಯಕ್ಷ ಕೃಷ್ಣ ಎಂ. ಅಳಿಕೆ, ನವೀನ್ ಕುಲಾಲ್ ಹಾಗೂ ಕುಲಾಲ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!