ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರ ಹತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅವುಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ತಿಳಿಸಿದ್ದಾರೆ.ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರಗಳಲ್ಲಿ ಜನಪ್ರತಿನಿಧಿಗಳು ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಮೆಸ್ಕಾಂ ಅನ್ನು ಖಾಸಗೀಕರಣಗೊಳಿಸಬಾರದು, ಜಿಲ್ಲೆಯ ರಸ್ತೆಗಳಲ್ಲಿ ಟೋಲ್ ಸಂಗ್ರಹವನ್ನು ವಿಸ್ತರಿಸಬಾರದು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಿ ಕ್ರೀಡಾಪಟುಗಳಿಗೆ ಉಚಿತವಾಗಿ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿ ತಾಲೂಕಿಗೆ ವೈಜ್ಞಾನಿಕ ಸೌಲಭ್ಯ ಹೊಂದಿದ ಕಸಾಯಿಖಾನೆಯನ್ನು ಸ್ಥಾಪಿಸಬೇಕು, ಕರಾವಳಿ ಭಾಗದ ಪ್ರಮುಖ ಆಹಾರವಾದ ಕುಚ್ಚಲು ಅಕ್ಕಿಯನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಬೇಕು, ಸರ್ಕಾರಿ ಬಸ್ ಸೇವೆ ಇಲ್ಲದ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.ಕಡಬ ತಾಲೂಕಿನ ಕೊಯಿಲದಲ್ಲಿನ ಪಶುವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಕೆಂಪುಕಲ್ಲು ಹಾಗೂ ಮರಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಸೂಕ್ತ ನೀತಿ ರೂಪಿಸಬೇಕು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಆಶ್ರಫ್ ತಲಪ್ಪಾಡಿ, ಪುತ್ತೂರು ಶಾಸಕರ ವಿರುದ್ಧ ಟೀಕೆ ವ್ಯಕ್ತಪಡಿಸಿ, ಅಭಿವೃದ್ಧಿ ಕಾಮಗಾರಿಗಳಿಗಿಂತ ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು,ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು







