
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ. 53.03 ಲಕ್ಷ ಮೌಲ್ಯದ 1 ಕ್ವಿಂಟಾಲ್ 6 ಕೆಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಂಜಾ ಪೂರೈಕೆ ಜಾಲಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜ. 19, 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಆರೋಪಿಗಳಿಗೆ ಹಣ ಹಾಗೂ ವಾಹನದ ವ್ಯವಸ್ಥೆ ಮಾಡಿದ್ದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ. (27) ಮತ್ತು ಕಕ್ಕಿಂಜೆ ನಿವಾಸಿ ನಝಿರ್ (42) ಅವರನ್ನು ದಸ್ತಗಿರಿ ಮಾಡಿದ್ದಾರೆ.
ಇನ್ನಷ್ಟು ತನಿಖೆಯಲ್ಲಿ ಆರೋಪಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನ ಪತ್ತೆಯಾಗಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ಒರಿಸ್ಸಾಕ್ಕೆ ತೆರಳಿ ಆತನನ್ನು ಬಂಧಿಸಿದೆ. ಈ ವೇಳೆ ಆತನಿಂದ ರೂ. 80,000 ಮೌಲ್ಯದ 1 ಕೆಜಿ 788 ಗ್ರಾಂ ಗಾಂಜಾವನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ. ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ್ ಮತ್ತು ದಿವ್ಯಪ್ರಕಾಶ್ ಭಾಗವಹಿಸಿದ್ದರು.






