
ವಿಟ್ಲ: ಬಸ್ ನಿಲ್ದಾಣದ ಸಮೀಪ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ವಿಟ್ಲ ಮುನ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಡಿಕ್ಕಿ ಹೊಡೆದ ನಂತರ ಬೈಕ್ ಸುಮಾರು 50 ಮೀಟರ್ ದೂರ ರಸ್ತೆಯಲ್ಲಿ ಎಳೆಯುತ್ತ ಹೋಗಿ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದ ಸವಾರನನ್ನು ಕಾಶಿಮಠ ನಿವಾಸಿ ಪ್ರತಾಪ್ ಮಾನವೀಯತೆ ತೋರಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






