
ಪುತ್ತೂರು: ನಾಡು-ನುಡಿ ಮತ್ತು ಸರಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಶಾಲೆ ಉಳಿಸಿ–ಬೆಳೆಸಿ’ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಪುತ್ತೂರಿನ ಪತ್ರಕರ್ತ ಯೂಸುಫ್ ರೆಂಜಲಾಡಿಯವರನ್ನು ನೇಮಕ ಮಾಡಲಾಗಿದೆ.
ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಯೂಸುಫ್ ರೆಂಜಲಾಡಿ ಅವರು ಕಳೆದ 12 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ.
ಇದಲ್ಲದೆ, ರೆಂಜಲಾಡಿ ಕೆವೈಎಂಎ ಅಧ್ಯಕ್ಷರಾಗಿ, ಸರ್ವೆ ಸೌಹಾರ್ದ ವೇದಿಕೆಯ ನಿರ್ದೇಶಕರಾಗಿ, ಸಂಯುಕ್ತ ಜಮಾಅತ್ ತಾಲೂಕು ಮಾಧ್ಯಮ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಲವು ಸರಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಪರಿಣಾಮಕಾರಿ ವರದಿಗಳನ್ನು ಪ್ರಕಟಿಸುವ ಮೂಲಕ ಸಂಬಂಧಿತ ಅಧಿಕಾರಿಗಳ ಗಮನ ಸೆಳೆದಿದ್ದು, ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.






