
ಬೆಳಗಾವಿಯಲ್ಲಿ (Belagavi) ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ.
ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು.
ಆರೋಪಿಗಳು ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬ್ಲ್ಯಾಕ್ಮೇಲ್ ಬಗ್ಗೆ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಆ ಬಳಿಕ ಕಮಿಷನರ್ ಸೂಚನೆಯಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಮಾಳಮಾರುತಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಸ್ಯಾಮ್‌ಸಂಗ್ ಅಲ್ಟ್ರಾ ಮೊಬೈಲ್, ಒಂದು ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, ಆರು ರಹಸ್ಯ ಕ್ಯಾಮರಾಗಳು, ಎರಡು ಓಟಿಜಿ ಸಾಧನಗಳು, ಹಲವು ಮೆಮೊರಿ ಕಾರ್ಡ್‌ಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.
ಮನೆಯೊಳಗೆ ರಹಸ್ಯ ಕ್ಯಾಮರಾ ಅಳವಡಿಸಿದ್ಹೇಗೆ ಆರೋಪಿಗಳು?
ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಮನೆ ಕಿಟಕಿಯಲ್ಲಿ ಬೀಗದ ಕೀಲಿಕೈಯನ್ನು ಇಡುವ ವಿಚಾರವನ್ನು ತಿಳಿದಿದ್ದ ಆತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಮಹಿಳಾ ಅಧಿಕಾರಿ ಕೀಲಿಕೈ ಕಿಟಕಿಯಲ್ಲಿ ಇಟ್ಟು ಹೋಗಿದ್ದಾಗ ಮನೆ ಕೆಲಸದಾತ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಅದರಂತೆ, ಸಮಯ ನೋಡಿ ಮನೆಗೆ ನುಗ್ಗಿದ್ದ ಆರೋಪಿಗಳು ಬೆಡ್‌ರೂಮ್ ಹಾಗೂ ಹಾಲ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದರು. ಆ ಮೂಲಕ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ನಂತರ ತೆಗೆದುಕೊಂಡು ಹೋಗಿದ್ದರು.
ಬಳಿಕ ಖಾಸಗಿ ವಿಡಿಯೋ ಆಧರಿಸಿ ಮಹಿಳಾ ಅಧಿಕಾರಿ ಬಳಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.






