ದಕ್ಷಿಣ ಅಮೆರಿಕದ ಪರಾಗ್ವೇ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ದೇಶದ ಪ್ರಮುಖ ಡಿಜಿಟಲ್ ಬ್ಯಾಂಕ್ ಉಯೆನೊ (Ueno Bank) ದಿವಾಳಿಯಾಗಿದ್ದು, ಲಕ್ಷಾಂತರ ಗ್ರಾಹಕರು ತಮ್ಮ ಹಣ ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರನ್ನು ಪದಚ್ಯುತಗೊಳಿಸಿ ಗೃಹಬಂಧನದಲ್ಲಿರಿಸಲಾಗಿದೆ ಎಂಬ ಸುದ್ದಿಯೂ ವರದಿಯಾಗಿದೆ.
30 ಲಕ್ಷ ಗ್ರಾಹಕರಿಗೆ ಸಂಕಷ್ಟ
ಪರಾಗ್ವೇಯ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಉಯೆನೊ ಬ್ಯಾಂಕ್ ದೇಶದ ಸುಮಾರು 30 ಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತಿತ್ತು ಎನ್ನಲಾಗಿದೆ. ಬ್ಯಾಂಕ್‌ನಲ್ಲಿ ಸಾರ್ವಜನಿಕರ ಉಳಿತಾಯ, ಪಿಂಚಣಿ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ಹಣ ಸೇರಿದಂತೆ ದೊಡ್ಡ ಮೊತ್ತದ ಠೇವಣಿ ಇತ್ತು ಎಂದು ವರದಿ ಹೇಳಿದೆ.
ಬ್ಯಾಂಕ್‌ನ ಹಣಕಾಸು ನಿರ್ವಹಣೆಯಲ್ಲಿ ಅಕ್ರಮಗಳು, ನಿಯಮ ಉಲ್ಲಂಘನೆ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಸಾಲ ನೀಡಿದ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್ ತನಿಖೆ ನಡೆಸಿ ನವೆಂಬರ್ 3ರಂದು ಬ್ಯಾಂಕ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ.

ಬ್ಯಾಂಕ್‌ನ ಮಾಲೀಕ ಸಂಸ್ಥೆ ಗ್ರೂಪೋ ವಾಜ್ಕ್ವೆಜ್‌ನೊಂದಿಗೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರಿಗೆ ಸಂಬಂಧವಿದೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್‌ನ ವ್ಯವಹಾರಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಬೆಳವಣಿಗೆಯಿಂದ ಅಧ್ಯಕ್ಷರ ವಿರುದ್ಧ ರಾಜಕೀಯ ಒತ್ತಡ ಹೆಚ್ಚಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ ಎನ್ನಲಾಗಿದೆ. ನವೆಂಬರ್ 5ರಂದು ರಾಜೀನಾಮೆ ಘೋಷಿಸಿದರೂ, ಬಳಿಕ ಅವರನ್ನು ಪದಚ್ಯುತಗೊಳಿಸಿ ಗೃಹಬಂಧನದಲ್ಲಿರಿಸಲಾಗಿದೆ ಎಂಬ ಮಾಹಿತಿ ವರದಿಯಲ್ಲಿದೆ.
ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ?
ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಿಂಚಣಿದಾರರು, ಸರ್ಕಾರಿ ನೌಕರರು ಸೇರಿದಂತೆ ಲಕ್ಷಾಂತರ ಮಂದಿ ತಮ್ಮ ಹಣ ಪಡೆಯಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂಬ ವರದಿಯೂ ಹರಿದಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 27ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಉಪಾಧ್ಯಕ್ಷ ಪೆಡ್ರೊ ಅಲೈಯಾನಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ವರದಿಯಲ್ಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!