ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ವಿಳಂಬವಾಗದಂತೆ ಹಾಗೂ ಹಣಕಾಸಿನ ಸಮಸ್ಯೆಯಿಂದ ಚಿಕಿತ್ಸೆ ನಿರಾಕರಣೆಯಾಗದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ರಾಹತ್ (PM-RAHAT) ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿಯೂ ₹1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಲಭ್ಯವಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ 2026ರ ಫೆ. 13ರಂದು ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಅಪಘಾತ ಸಂಭವಿಸಿದ ದಿನಾಂಕದಿಂದ ಗರಿಷ್ಠ ಏಳು ದಿನಗಳವರೆಗೆ, ಪ್ರತಿ ಸಂತ್ರಸ್ತರಿಗೆ ₹1.5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಯಾವುದೇ ರಸ್ತೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ನಾಗರಿಕರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅಪಘಾತ ಸಂಭವಿಸಿದ 24 ಗಂಟೆಗಳ ಒಳಗಾಗಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಪಿಎಂ ರಾಹತ್ ಯೋಜನೆಯಡಿ ಚಿಕಿತ್ಸೆ ಆರಂಭಿಸಿದಲ್ಲಿ ಈ ಸೌಲಭ್ಯ ಅನ್ವಯವಾಗಲಿದೆ.
ಯೋಜನೆಯಡಿ ಚಿಕಿತ್ಸೆಯ ಪ್ರಕ್ರಿಯೆಯ ನೈಜ ಸಮಯದ ಮೇಲ್ವಿಚಾರಣೆ ಹಾಗೂ ಪೊಲೀಸ್ ದೃಢೀಕರಣಕ್ಕಾಗಿ eDAR ಮತ್ತು TMS 2.0 ಡಿಜಿಟಲ್ ವ್ಯವಸ್ಥೆಗಳನ್ನು ಸಂಪರ್ಕಿಸಲಾಗಿದೆ. ಮೋಟಾರು ವಾಹನ ಅಪಘಾತ ನಿಧಿಯ ಮೂಲಕ ಯೋಜನೆಗೆ ಹಣಕಾಸು ಒದಗಿಸಲಾಗುತ್ತದೆ.
ಮಂಗಳೂರಿನಲ್ಲಿ 109 ಮಂದಿಗೆ ಸೌಲಭ್ಯ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2026ರ ಜು. 21ರಿಂದ ಆಸ್ಪತ್ರೆಗಳಲ್ಲಿ ಪಿಎಂ ರಾಹತ್ ಯೋಜನೆಗೆ ಅಗತ್ಯವಾದ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿ, ಗಾಯಾಳುಗಳ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಈವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ 109 ರಸ್ತೆ ಅಪಘಾತದ ಗಾಯಾಳುಗಳು ಯೋಜನೆಯಡಿ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಪಡೆದಿದ್ದಾರೆ.
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 172 ಗಾಯಾಳುಗಳಿಗೆ ಈ ಯೋಜನೆಯಡಿ ನಗದು ರಹಿತ ಚಿಕಿತ್ಸೆ ಒದಗಿಸಲಾಗಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಗಾಯಾಳುಗಳಿಗೆ ಯೋಜನೆಯ ಸೌಲಭ್ಯ ಒದಗಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಪಾತ್ರವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಪಿಎಂ ರಾಹತ್ ಯೋಜನೆಯಡಿ ಲಭ್ಯವಿರುವ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!