ಪುತ್ತೂರು: ಸುಳ್ಯ ಸೇರಿದಂತೆ ಪುತ್ತೂರು ಸುಳ್ಯ ನಡುವಿನ ಪ್ರದೇಶಗಳಿಂದ ಪುತ್ತೂರಿಗೆ ಕೆಲಸಕ್ಕೆಂದು ಬರುವ ಪ್ರಯಾಣಿಕರಿಗೆ ಅನುಕೂಲಕರವಾಗಿದ್ದ ಪುತ್ತೂರು-ಸುಳ್ಯ ಸರಕಾರಿ ಲೋಕಲ್ ಬಸ್ಸುಗಳ ಸಂಚಾರದಲ್ಲಿ ರಾತ್ರಿ 7.30 ಬಳಿಕ ವ್ಯತ್ಯಯ ಉಂಟಾಗುತ್ತಿರುವುದರಿಂದ ಇದನ್ನೆ ನಂಬಿಕೊಂಡಿರುವ ಹಲವಾರು ನಿತ್ಯ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ.
ನ.30ರ ಶನಿವಾರದಂದು ಇದೇ ಪರಿಸ್ಥಿತಿ ನಿರ್ಮಾಣಗೊಂಡ ಕಾರಣ ಪುತ್ತೂರಿನಿಂದ ಕಚೇರಿ ಸೇರಿದಂತೆ ವಿವಿಧ ಕೆಲಸಗಳನ್ನು ಮುಗಿಸಿ ತಮ್ಮ ಮನೆಗಳಿಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರು ಸೇರಿದಂತೆ ಹಲವು ಪ್ರಯಾಣಿಕರು ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ಪರದಾಡುವಂತಾಗಿತ್ತು.
ಈ ಹಿಂದೆ 7.15, 7.45 ಮತ್ತು 8.30ರ ಅವಧಿಯಲ್ಲಿ ಮೂರು ಬಸ್ಸುಗಳು ಪುತ್ತೂರಿನಿಂದ ಸುಳ್ಯಕ್ಕೆ ಸಂಚರಿಸುತ್ತಿದ್ದ ಕಾರಣ ಈ ಮಾರ್ಗದಲ್ಲಿ ತೆರಳುವ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ರಾತ್ರಿ 7.15ರ ಬಳಿಕ ಸುಳ್ಯ ಭಾಗಕ್ಕೆ ತೆರಳುವ ನಿತ್ಯ ಪ್ರಯಾಣಿಕರಿಗೆ ನಿಯಮಿತವಾಗಿ ಬಸ್ಸು ಬರದೇ ಇರುವುದು ಪ್ರಯಾಣಿಕರಿಗೆ ತೊಂದರೆಗೆ ಕಾರಣವಾಗಿದೆ.
7.15ರ ಬಸ್ಸು ಹೊರಟ ಬಳಿಕ ಸುಳ್ಯಕ್ಕೆ ಬಸ್ಸೇ ಇಲ್ಲ ಎಂಬಂತ ಸ್ಥಿತಿ ಕಳೆದ ಕೆಲವು ದಿನಗಳಿಂದ ನಿರ್ಮಾಣಗೊಂಡಿದೆ. ನಿನ್ನೆಯಂತೂ (ನ.30) ಕೆಲವು ಮಹಿಳಾ ಪ್ರಯಾನಿಕರು 8.30ರವರೆಗೆ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬಳಿಕ ಬದಲಿ ವ್ಯವಸ್ಥೆಯ ಮೊರೆಹೋದ ಪ್ರಸಂಗವೂ ನಡೆದಿದೆ.
ಈ ಬಸ್ಸಿನಲ್ಲಿ ಪ್ರತಿದಿನ ಇಲ್ಲಿಂದ ಕೆಲಸ ಮುಗಿಸಿ ತೆರಳುವ ಪ್ರಯಾಣಿಕರೇ ಹೆಚ್ಚಿನವರಾಗಿದ್ದು, ಇವರಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಸ್ಸು ಯಾವುದೇ ಮಾಹಿತಿ ನೀಡದೆ ಟ್ರಿಪ್ ಕ್ಯಾನ್ಸಲ್ ಮಾಡಿದರೆ ರಾತ್ರಿ ಹೊತ್ತು ಮಹಿಳಾ ಪ್ರಯಾಣಿಕರು ತಮ್ಮ ಮನೆ ಸೇರುವುದು ಹೇಗೆ? ಎಂಬುದು ಪ್ರಯಾಣಿಕರ ಅಳಲಾಗಿದೆ.
ಇನ್ನು, ಬಸ್ಸು ಸೇವೆ ಬಗ್ಗೆ ಇಲ್ಲಿ ಕರ್ತವ್ಯದಲ್ಲಿರುವ ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಬಳಿ ವಿಚಾರಿಸಿದರೆ ಅವರು ‘ಬಸ್ಸು ಬಂದ್ರೆ ಬರ್ತದೆ.. ಇಲ್ಲಾಂದ್ರೆ ಇಲ್ಲ..’ ಎಂಬ ಉತ್ತರವನ್ನು ನೀಡುತ್ತಾರೆ ಎಂದು ನೊಂದ ಪ್ರಯಾಣಿಕರು ಮಾಧ್ಯಮಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ, ಸುಳ್ಯದಂತಹ ಪ್ರಮುಖ ಭಾಗಕ್ಕೆ ಸಂಚರಿಸುವ ಬಸ್ಸನ್ನು ನಿಯಮಿತವಾಗಿ ನಿರ್ಧಿಷ್ಟ ಸಮಯದಲ್ಲಿ ಓಡಿಸಬೇಕೆನ್ನುವುದು ಪ್ರಯಾಣಿಕರ ಆಗ್ರಹವಾಗಿದೆ. ಈ ಕುರಿತಾಗಿ ಪುತ್ತೂರು ಕ್ಷೇತ್ರದ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.