

ಬೆಂಗಳೂರು, ಡಿಸೆಂಬರ್ 01: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಶನಿವಾರ ತಮಿಳುನಾಡಿನ ಪುದುಚೇರಿ ಕರಾವಳಿಗೆ ಅಪ್ಪಳಿಸಿದ ಪೆಂಗಲ್ ಚಂಡಮಾರುತವು ಸದ್ಯ ಅಲ್ಲಿಯೇ ಕೇಂದ್ರೀಕೃತವಾಗಿದೆ. ಇದರಿಂದಾಗಿ ತಮಿಳುನಾಡು, ಚೆನ್ನೈ ಮಾತ್ರವಲ್ಲದೇ, ಕರ್ನಾಟಕ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸೈಕ್ಲೋನಿಕ್ ಚಂಡಮಾರುತ ನೆಲೆಗೊಂಡಿದೆ. ಇಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗಳ ಅವಧಿಯಲ್ಲಿ ಸ್ಥಿರವಾಗಿದ್ದರ ಬಗ್ಗೆ ಬೆಂಗಳೂರು ಐಎಂಡಿ ಕಚೇರಿ ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಖಚಿತಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 05 ದಿನ ಅಂದರೆ ಡಿಸೆಂಬರ್ 05ರವರೆಗೆ ಮೈ ಕೊರೆವ ಚಳಿ ಸಹಿತ ಧಾರಾಕಾರ ಮಳೆ ಆಗಲಿದೆ. ಹಾಗಾದರೆ ಯಾವ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್, ಆರೆಂಜ್ ಅಲರ್ಟ್’ ಇದೆ ಎಂಬ ಮುನ್ಸೂಚನೆ ಮಾಹಿತಿ ಇಲ್ಲಿದೆ.
ಭಾರೀ ಮಳೆಯ ಅಲರ್ಟ್ ಪಡೆದ ಜಿಲ್ಲೆಗಳ ಪಟ್ಟಿ
ಚಂಡಮಾರುತ ಫೆಂಗಲ್ ಎಫೆಕ್ಟ್‌ನಿಂದಾಗಿ ಡಿಸೆಂಬರ್ 2, 3 ಮತ್ತು 4ರಂದು ಕರಾವಳಿಯ ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ರಾಮನಗರ, ಮಂಡ್ಯ ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲಟ್’ ಘೋಷಿಸಲಾಗಿದೆ.
ಡಿಸೆಂಬರ್ 3ರಂದು ಮಾತ್ರ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ವಿಪರೀತ ಗಾಳಿ ಸಮೇತ ಅತ್ಯಧಿಕ ಮಳೆ ಆರ್ಭಟ ಕಂಡು ಬರಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ‘ಆರೆಂಜ್ ಅಲರ್ಟ್’ ನೀಡಲಾಗಿದೆ ಎಂದು ಐಎಂಡಿ ಹವಾಮಾನ ವರದಿ ತಿಳಿಸಿದೆ.
ಡಿಸೆಂಬರ್ 5ರಂದು ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾದೆಲಿ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
