









ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿ ಆನ್‌ಲೈನ್ ಹೂಡಿಕೆ (Investment) ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ನಡೆಸುತ್ತಿದ್ದ ಅಂತರರಾಷ್ಟ್ರೀಯ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಭೇದಿಸಿದ್ದು, ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಂಚನೆ ಜಾಲದಲ್ಲಿ 16 ಮಂದಿ ಭಾರತೀಯರು ಹಾಗೂ ಕೆಲವು ಚೀನಾದ ಪ್ರಜೆಗಳು ಸೇರಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ಚೀನಾದ ಆರೋಪಿತರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಬಂಧಿತರಿಂದ ವಶಪಡಿಸಿಕೊಂಡ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ 624 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿವೆ. ಈ ಖಾತೆಗಳ ವಿರುದ್ಧ ದೇಶದಾದ್ಯಂತ NCRP ಪೋರ್ಟಲ್‌ನಲ್ಲಿ 4,580ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ. ಅವುಗಳಲ್ಲಿ ಒಂದೇ ಖಾತೆಯಲ್ಲಿ ₹167 ಕೋಟಿ ಹಣ ವಹಿವಾಟಾಗಿರುವ ಮಾಹಿತಿ ಲಭ್ಯವಾಗಿದೆ. ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ₹30.70 ಕೋಟಿ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿದೆ.
ಪ್ರಕರಣದ ಹಿನ್ನೆಲೆ
ಸೆನ್ ಕ್ರೈಂ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 02/2026ರಲ್ಲಿ ಐಟಿ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಬಿಎನ್‌ಎಸ್ ಕಾಯ್ದೆಯ ಕಲಂ 318(4), 308(5) ಅಡಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರಿಂದ ₹1.38 ಕೋಟಿ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ತಾಂತ್ರಿಕ ವಿಶ್ಲೇಷಣೆ ಹಾಗೂ ತನಿಖೆಯ ಮೂಲಕ ವಂಚಕರು ನೇಪಾಳದಿಂದ ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಯಿತು.
ಒಂದು ತಂಡ ನೇಪಾಳದಲ್ಲಿ ನೆಲೆಸಿ ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಮತ್ತು ಏಜೆಂಟ್‌ಗಳನ್ನು ನೇಮಿಸಿಕೊಂಡು ವಂಚನೆಯ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುತ್ತಿತ್ತು. ನಂತರ ಆ ಹಣವನ್ನು USDT ಕ್ರಿಪ್ಟೋ ಕರೆನ್ಸಿಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು.
ಇನ್ನೊಂದು ತಂಡ ಕಾಂಬೋಡಿಯಾ ಹಾಗೂ ಇತರ ದೇಶಗಳಿಂದ ಹೂಡಿಕೆದಾರರನ್ನು ಸಂಪರ್ಕಿಸಿ, ವಿದೇಶದಲ್ಲಿರುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮಾತನಾಡಿಸಿ ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಹಣ ಹೂಡಿಕೆ ಮಾಡಿಸುತ್ತಿತ್ತು. ಈ ವಹಿವಾಟಿನ ನಿಯಂತ್ರಣ ನೇಪಾಳದ ತಂಡದ ಕೈಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳನ್ನು ಪಡೆಯುವ ವಿಧಾನ
ವಂಚಕರು ಇನ್‌ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಮೂಲಕ ನಕಲಿ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡಿ, ಕಾರ್ಪೊರೇಟ್ ಮತ್ತು ಕರೆಂಟ್ ಖಾತೆದಾರರು, ಎಕ್ಸ್‌ಚೇಂಜ್ ಆಪರೇಟರ್‌ಗಳು, OTP ವರ್ಕರ್‌ಗಳು ಬೇಕು ಎಂದು ಸಂಪರ್ಕಿಸುತ್ತಿದ್ದರು. 5–10 ಶೇಕಡಾ ಕಮಿಷನ್, ಉಚಿತ ಪ್ರಯಾಣ, ವಸತಿ ವ್ಯವಸ್ಥೆಯ ಆಮಿಷ ನೀಡಿ ಖಾತೆದಾರರನ್ನು ದುಬೈ, ನೇಪಾಳ ಸೇರಿದಂತೆ ವಿದೇಶಗಳಿಗೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರ ಸಿಮ್‌ಗಳನ್ನು ಬಳಸಿ ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ನಡೆಸುತ್ತಿದ್ದರು.
ಹೂಡಿಕೆದಾರರನ್ನು ಸೆಳೆಯುವ ತಂತ್ರ
ವಾಟ್ಸಾಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್‌ಬುಕ್ ಮೂಲಕ ಅಪರಿಚಿತ ಸಂಖ್ಯೆಯಿಂದ ಸಂಪರ್ಕಿಸಿ ಹೆಚ್ಚಿನ ಲಾಭಾಂಶದ ಭರವಸೆ ನೀಡಲಾಗುತ್ತಿತ್ತು. ನಕಲಿ ಆಪ್ ಮೂಲಕ ಲಾಭ ತೋರಿಸಿ ನಂಬಿಕೆ ಹುಟ್ಟಿಸಿ, ನಂತರ ಹೆಚ್ಚಿನ ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತಿತ್ತು. ಈ ಜಾಲ ದಿನಕ್ಕೆ ₹60 ಲಕ್ಷದಿಂದ ₹1 ಕೋಟಿ ತನಕ ವಂಚನೆ ನಡೆಸುತ್ತಿತ್ತು ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರಿಕೆ
ವಿದೇಶದಲ್ಲಿ ಉದ್ಯೋಗದ ಆಮಿಷ ನೀಡಿ ಯುವಕರನ್ನು ಟೂರಿಸ್ಟ್ ವೀಸಾದಲ್ಲಿ ಕರೆದುಕೊಂಡು ಹೋಗಿ ದಾಖಲೆಗಳನ್ನು ವಶಪಡಿಸಿಕೊಂಡು ಸೈಬರ್ ವಂಚನೆ ಕಾರ್ಯಗಳಿಗೆ ಬಳಸುವ ‘ಡಿಜಿಟಲ್ ಸ್ಲೇವರಿ’ ಪ್ರಕರಣಗಳೂ ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಇಂತಹ ಪರಿಸ್ಥಿತಿಯಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು
ಪೊಲೀಸರು ಆರೋಪಿಗಳಿಂದ ಒಂದು ಲ್ಯಾಪ್‌ಟಾಪ್, 21 ಮೊಬೈಲ್ ಫೋನ್, 20 ಸಿಮ್ ಕಾರ್ಡ್ ಮತ್ತು 20 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರಿಗೆ ಸೂಚನೆ
ಸೈಬರ್ ವಂಚನೆ ನಡೆದ ಒಂದು ಗಂಟೆಯೊಳಗೆ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಹೆಚ್ಚಿನ ಲಾಭಾಂಶದ ಆಮಿಷ, ನಕಲಿ ಹೂಡಿಕೆ ಜಾಹೀರಾತು, OTP ಹಂಚಿಕೆ, ಅನುಮಾನಾಸ್ಪದ ಲಿಂಕ್‌ಗಳು ಹಾಗೂ ವಿಡಿಯೊ ಕಾಲ್ ಮೂಲಕ ಅಧಿಕಾರಿಗಳಂತೆ ನಟಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮಂಗಳೂರು






