ಪುತ್ತೂರು:ಪುತ್ತೂರಿನ ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಸೈನ್ಸ್ (ಪದವಿ ವಿಜ್ಞಾನ) ವಿಭಾಗ ಆರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಕೊರತೆಯಿಂದ ವಿದ್ಯಾರ್ಥಿನಿಯರು ಸಂಕಷ್ಟ ಅನುಭವಿಸುತ್ತಿರುವುದನ್ನು ಗಮನಕ್ಕೆ ತಂದರು. ಈಗಾಗಲೇ ಹೊಸ ಕಾಲೇಜು ಕಟ್ಟಡ ನಿರ್ಮಾಣವಾಗಿರುವುದರಿಂದ ಕೊಠಡಿ ಕೊರತೆಯೂ ನಿವಾರಣೆಯಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜ್ಞಾನ ವಿಭಾಗ ಆರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ವರ್ಷದಿಂದಲೇ ವಿಭಾಗ ಆರಂಭಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಇದಲ್ಲದೆ, ಕಾಲೇಜಿಗೆ ಅಗತ್ಯ ಪೀಠೋಪಕರಣಗಳಿಗಾಗಿ ₹1 ಕೋಟಿ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ. ವಿಜ್ಞಾನ ವಿಭಾಗ ಆರಂಭವಾದ ಬಳಿಕ ಪ್ರಯೋಗಾಲಯಗಳ ಅವಶ್ಯಕತೆ ಇರುವುದರಿಂದ, ಅಗತ್ಯ ಉಪಕರಣಗಳನ್ನು ಒದಗಿಸಲು ಸಹ ಅನುದಾನ ನೀಡುವ ಭರವಸೆ ಸಚಿವರಿಂದ ಲಭಿಸಿದೆ ಎಂದು ತಿಳಿಸಿದ್ದಾರೆ.
“ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈನ್ಸ್ ವಿಭಾಗ ಆರಂಭಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಹಿಂದೆ ಮನವಿ ಮಾಡಿದ್ದರು. ಈ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕುಟುಂಬಗಳ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವುದರಿಂದ, ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿ. ಸರ್ಕಾರದ ಮೇಲೆ ಒತ್ತಡ ತಂದು ಸೈನ್ಸ್ ವಿಭಾಗಕ್ಕೆ ಅನುಮತಿ ಪಡೆಯಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ,” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.














