ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ ಕುರಿತು ನಡೆದ ಸಭೆಯಲ್ಲಿ ದೇವಸ್ಥಾನ ಸಂರಕ್ಷಣಾ ಸಮಿತಿ, ಬಿಜೆಪಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೆ, ಉದ್ದೇಶಿತ ರಸ್ತೆಯ ಫಲಾನುಭವಿಗಳಾದ ಕಂಬಳಕೋಡಿ ಭಾಗದ ನಿವಾಸಿಗಳು ರಸ್ತೆ ನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಿದರು. ವಿವಾದವನ್ನು ಸಂಘರ್ಷದ ಬದಲಾಗಿ ಸಂವಾದದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಸಭೆಯಲ್ಲಿ ಮಾತನಾಡಿದ ವೈದ್ಯ ಡಾ. ಸುರೇಶ್ ಪುತ್ತೂರಾಯ, ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ಭಕ್ತರ ಅಭಿಪ್ರಾಯಗಳಿಗೆ ಗೌರವ ನೀಡಿ ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ, ದೇವಸ್ಥಾನದ ವಿಚಾರಗಳು ಅನಗತ್ಯವಾಗಿ ವಿವಾದಕ್ಕೀಡಾಗುತ್ತಿರುವುದು ವಿಷಾದನೀಯ ಎಂದರು. ರಸ್ತೆ ನಿರ್ಮಾಣದಿಂದ ಸಾರ್ವಜನಿಕ ಸಂಚಾರಕ್ಕೆ ತಾವು ವಿರೋಧಿಯಲ್ಲ. ಆದರೆ ನಟರಾಜ ವೇದಿಕೆಯ ತೆರವು ಸೇರಿದಂತೆ ಹಲವು ವಿಷಯಗಳಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ಆರೋಪಿಸಿದರು. ಭಕ್ತರ ಸಭೆ ಕರೆದು ಎಲ್ಲ ಆಯಾಮಗಳ ಕುರಿತು ಚರ್ಚಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅರುಣ್ ಪುತ್ತಿಲ, ದೇವಸ್ಥಾನದ ಜಾಗವನ್ನು ಅತಿಕ್ರಮಣದಿಂದ ಮರಳಿ ಪಡೆದುಕೊಂಡಿರುವುದು ಶ್ಲಾಘನೀಯ ಕಾರ್ಯ. ಆದರೆ ಭಕ್ತರ ಅಪೇಕ್ಷೆಗೆ ವಿರುದ್ಧವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಬೇಸರ ತಂದಿದೆ ಎಂದರು. ಎಸ್‌ಪಿಟಿ ತೋಡಿನ ಎರಡೂ ಬದಿಯಲ್ಲಿ ಕಾಂಕ್ರೀಟ್ ಗೋಡೆ ನಿರ್ಮಿಸಿ ಅದರ ಮೇಲೆ ರಸ್ತೆ ನಿರ್ಮಿಸುವ ಪರ್ಯಾಯ ಪ್ರಸ್ತಾವನೆ ಮಂಡಿಸಿದ ಅವರು, ಇದರಿಂದ ಕಂಬಳಕೋಡಿ ನಿವಾಸಿಗಳಿಗೆ ರಸ್ತೆ ಸಿಗುವುದರ ಜೊತೆಗೆ ದೇವಸ್ಥಾನದ ಜಾಗವೂ ಸಂರಕ್ಷಿತವಾಗುತ್ತದೆ ಎಂದರು. ರಸ್ತೆ ನಿರ್ಮಾಣವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿದರೆ ದೇವಸ್ಥಾನದ ಒಂದಿಂಚು ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ದಿನೇಶ್ ಜೈನ್, ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಉದ್ಯಮಿ ಉಜ್ವಲ್ ಪ್ರಭು, ಏಕಪಕ್ಷೀಯ ನಿರ್ಧಾರಗಳನ್ನು ಪುತ್ತೂರಿನ ಜನ ಒಪ್ಪುವುದಿಲ್ಲ ಎಂದು ಅಭಿಪ್ರಾಯಪಟ್ಟರು.’ರಸ್ತೆ ಇಲ್ಲದೆ ವರ್ಷಗಳಿಂದ ಸಂಕಷ್ಟ’ಕಂಬಳಕೋಡಿ ನಿವಾಸಿಗಳ ಪರವಾಗಿ ಮಾತನಾಡಿದ ದಿವಾಕರ ಮಡಿವಾಳ, ತಮ್ಮ ಕುಟುಂಬ ಈ ಹಿಂದೆ ರಥಬೀದಿ ರಸ್ತೆಗೆ ಮೂರು ಎಕರೆ ಜಾಗ ನೀಡಿದ್ದರೂ, ಈಗ ತಮ್ಮ ಮನೆಗಳಿಗೆ ಸಮರ್ಪಕ ರಸ್ತೆ ಇಲ್ಲದ ಸ್ಥಿತಿ ಎದುರಾಗಿದೆ ಎಂದರು. ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡದಿದ್ದರೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ವೇದಾವತಿ ಮಾತನಾಡಿ, ರಸ್ತೆ ಸಂಪರ್ಕದ ಕೊರತೆಯಿಂದ ಗರ್ಭಿಣಿಯಾಗಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸೇರಿದಂತೆ ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇವೆ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದ್ದು, ರಸ್ತೆ ಇಲ್ಲದ ಕಾರಣ ಸಂಬಂಧಿಕರೂ ಮನೆಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.ಕಂಬಳಕೋಡಿ ನಿವಾಸಿಗಳು, ಕಳೆದ 30 ವರ್ಷಗಳಿಂದ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಮುಂದುವರಿದಿದೆ. ಹಲವು ಆಡಳಿತ ಮಂಡಳಿಗಳು ಹಾಗೂ ಜನಪ್ರತಿನಿಧಿಗಳು ಬಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮೊದಲ ಬಾರಿಗೆ ಸ್ಥಳೀಯ ಶಾಸಕರು ₹3 ಕೋಟಿ ಅನುದಾನ ತಂದಿದ್ದು, ಈಗ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದರೆ 25 ಮನೆಗಳ ಜನರ ದೀರ್ಘಕಾಲದ ಸಮಸ್ಯೆ ಮತ್ತಷ್ಟು ಮುಂದುವರಿಯಲಿದೆ ಎಂದು ಹೇಳಿದರು.’ದೇವಸ್ಥಾನದ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ದೇವಸ್ಥಾನ ಸಂರಕ್ಷಣಾ ಸಮಿತಿಯ ಪ್ರಮುಖ ಸದಸ್ಯ ಹರಿಪ್ರಸಾದ್ ನೆಲ್ಲಿಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂರಕ್ಷಣಾ ಸಮಿತಿಯ ಸಾಮಾಜಿಕ ಜಾಲತಾಣ ಗುಂಪಿನಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಮಿತಿಯ ಹೋರಾಟ ಪ್ರತಿಷ್ಠೆಗಾಗಿ ಅಲ್ಲ, ಸತ್ಯ ಮತ್ತು ಧರ್ಮದ ಪರವಾಗಿದೆ ಎಂದು ಹೇಳಿದರು.ಹಿಂದಿನ ಆಡಳಿತ ಮಂಡಳಿಯ ತಪ್ಪುಗಳನ್ನು ಹೇಗೆ ಸೂಚಿಸಿದ್ದೇವೋ, ಈಗಿನ ಆಡಳಿತ ಮಂಡಳಿಯ ಕಾರ್ಯಗಳಲ್ಲಿಯೂ ವ್ಯತ್ಯಾಸ ಕಂಡರೆ ಗಮನಕ್ಕೆ ತರುತ್ತೇವೆ. ಉತ್ತಮ ಕೆಲಸಗಳಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದೇವೆ ಎಂದರು. ದೇವಸ್ಥಾನದ ಅತಿಕ್ರಮಿತ ಜಾಗವನ್ನು ಮರಳಿ ಪಡೆಯುವಲ್ಲಿ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ಅವರ ಪ್ರಯತ್ನವನ್ನು ಸ್ಮರಿಸಿದ ಅವರು, ಈಗ ಚರ್ಚೆಯಲ್ಲಿರುವ ತೋಡಿನ ಬಳಿಯ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇದರಿಂದ ಸುಮಾರು ಮೂರು ಎಕರೆ ಜಾಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಘಟನೆಗಳು ಹಲವು ಇದ್ದರೂ ದೇವಸ್ಥಾನದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.










