ಬಂಟ್ವಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಮೇ 12ರಂದು ಪಾಣೆಮಂಗಳೂರಿನ ಆಲಡ್ಕದ ಎಸ್‌.ಎಸ್‌. ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಎಚ್‌. ಉಮ್ಮರ್‌ ತಿಳಿಸಿದರು.
ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಬಳಿಯಿಂದ ಸಮ್ಮೇಳನ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರಾದ ಹಿರಿಯ ಕವಿ ಹಾಗೂ ಗಾಯಕ ರಹೀಂ ಬಿ.ಸಿ.ರೋಡು ಅವರ ಮೆರವಣಿಗೆ ನಡೆಯಲಿದ್ದು, ಅದನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಸಲಹೆಗಾರ ಹಾಜಿ ಪಿ. ಮುಹಮ್ಮದ್‌ ರಫೀಕ್‌ ಉದ್ಘಾಟಿಸಲಿದ್ದಾರೆ ಎಂದರು.
ಬೆಳಿಗ್ಗೆ 10ಕ್ಕೆ ಯು.ಎಚ್‌. ಉಮ್ಮರ್‌ ಧ್ವಜಾರೋಹಣ ನೆರವೇರಿಸಲಿದ್ದು, ಕರ್ನಾಟಕ ವಿಧಾನಸಭಾಧ್ಯಕ್ಷ ಡಾ. ಯು.ಟಿ. ಖಾದರ್‌ ಫರೀದ್‌ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ರಹೀಂ ಬಿ.ಸಿ.ರೋಡು ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ಶಾಸಕ ಯು. ರಾಜೇಶ್‌ ನಾಯಕ್‌ ಉಮೈರತ್‌ ಕುಮೇರ್‌ ಅವರ ‘ಬೈಲ್‌ ಮಲೆ’ (ಬ್ಯಾರಿ ಕಥಾಸಂಕಲನ) ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಹಾಜಿ ಬಿ.ಎಚ್‌. ಖಾದರ್‌, ಎಂ.ಎಸ್‌. ಮುಹಮ್ಮದ್‌, ಬಿ. ಅಬ್ದುಲ್‌ ಸಲಾಂ ತುಂಬೆ, ಡಾ. ಅಬ್ದುಲ್‌ ಬಶೀರ್‌ ವಿ.ಕೆ., ಡಾ. ಮುಸ್ತಪಾ ಬಸ್ತಿಕೋಡಿ, ಮುಮ್ತಾಝ್‌ ಎಚ್‌.ಐ. ಹಾಗೂ ಡಾ. ಹಸೀನಾ ಪೊನ್ನೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಭಾಷಣದ ಕುರಿತು ನಡೆಯುವ ಚರ್ಚಾಗೋಷ್ಠಿಯನ್ನು ಪತ್ರಕರ್ತ ಬಶೀರ್‌ ಅಡ್ಯನಡ್ಕ ನಿರೂಪಿಸಲಿದ್ದು, ಡಿ.ಬಿ. ಅಬ್ದುಲ್‌ ರಹಿಮಾನ್‌, ಆಯಿಷಾ ಯು.ಕೆ. ಮತ್ತು ಮುಹಮ್ಮದ್‌ ಶಾಹಿದ್‌ ವಳವೂರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಬ್ಯಾರಿ ಕವಿಗೋಷ್ಠಿ ನಡೆಯಲಿದ್ದು, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಬಿ. ರಮಾನಾಥ ರೈ, ಹಾಜಿ ಜಿ.ಎ. ಬಾವಾ, ಡಾ. ಬಿ.ಎಂ. ಬೀರಾನ್‌ ಮೊಹಿದಿನ್‌, ಹಾಜಿ ಉಸ್ಮಾನ್‌ ಕರೋಪಾಡಿ ಹಾಗೂ ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಬ್ದುಲ್‌ ರಜಾಕ್‌ ಅನಂತಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಡಾ. ಎಂ.ಎಂ. ಶರೀಫ್‌ ಆಲಡ್ಕ, ಅಬ್ಬೋನು ನಂದಾವರ, ಅವ್ವಮ್ಮ ಒಕ್ಕೆತ್ತೂರು, ಅಬ್ದುಲ್‌ ಖಾದರ್‌ (ಮೋನುಞ್ಞಿ) ಕಲ್ಲಡ್ಕ, ಇಸ್ಮಾಯಿಲ್‌ ಅರಬಿ ಬಂಟ್ವಾಳ, ಮೊಹಮ್ಮದ್‌ ಕೋಡಪದವು ಹಾಗೂ ಝುಬೈದಾ ಪರ್ಲೊಟ್ಟು ಅವರನ್ನು ಸನ್ಮಾನಿಸಲಾಗುವುದು. ದಫ್‌ ಪ್ರದರ್ಶನ, ಬ್ಯಾರಿ ಹಾಡುಗಳು ಮತ್ತು ‘ತೆರು ತಪ್ಪಿರ್‌’ ಬ್ಯಾರಿ ನಾಟಕ ಪ್ರದರ್ಶನವೂ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿ ಸಾಹಿತ್ಯ ಪರಿಷತ್‌ ಬಂಟ್ವಾಳ ಅಧ್ಯಕ್ಷ ಬಿ.ಎಂ. ಅಬ್ಬಾಸ್‌ ಅಲಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್‌ ಹನೀಫ್‌ ಗೋಳ್ತಮಜಲು, ಕೋಶಾಧಿಕಾರಿ ಆನಿಯಾ ದರ್ಬಾರ್‌ ಹಂಝ ಬಸ್ತಿಕೋಡಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್‌ ಅನಿಲಕಟ್ಟೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!