ಮಂಗಳೂರು: ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (BMS) ವತಿಯಿಂದ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ BMS ವತಿಯಿಂದ ಆಗಸ್ಟ್ 18ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಟೌನ್‌ಹಾಲ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.ಕಾರ್ಮಿಕರಿಗೆ ನ್ಯಾಯಯುತ ವೇತನ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸಬೇಕು ಎಂದು BMS ಆಗ್ರಹಿಸಿದೆ.ESIC ವೇತನ ಮಿತಿಯನ್ನು ₹21 ಸಾವಿರದಿಂದ ₹42 ಸಾವಿರಕ್ಕೆ, EPF ವೇತನ ಮಿತಿಯನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು. EPS-95 ಕನಿಷ್ಠ ಪಿಂಚಣಿಯನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸಿ, ಪಿಂಚಣಿದಾರರಿಗೆ ಡಿಎ ಹಾಗೂ ಸಮಗ್ರ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಬೋನಸ್ ಮಿತಿ ಹೆಚ್ಚಳ, ಗ್ರಾಚ್ಯುಟಿ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.ಆಶಾ, ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವಧನ ಹೆಚ್ಚಿಸಿ ಸಾಮಾಜಿಕ ಹಾಗೂ ನಿವೃತ್ತಿ ಭದ್ರತೆ ನೀಡಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಕಾನೂನು ಅನ್ವಯಿಸುವ ಕಡೆಗಳಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿಗೊಳಿಸಬೇಕು. ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸಬೇಕು ಹಾಗೂ ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ₹30 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.ಸ್ಥಳೀಯ ಸಮಸ್ಯೆಗಳಿಗೂ ಪರಿಹಾರಕ್ಕೆ ಆಗ್ರಹದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಮರಳು ಹಾಗೂ ಕೆಂಪುಕಲ್ಲಿನ ಸರಬರಾಜು ಖಚಿತಪಡಿಸಿ, ದರ ನಿಯಂತ್ರಿಸಬೇಕು. ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರಿಗೆ ನ್ಯಾಯಯುತ ಪ್ರಯಾಣ ದರ, ವಿಮೆ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು BMS ಆಗ್ರಹಿಸಿದೆ.ರಬ್ಬರ್, ಕೃಷಿ, ತೋಟಗಾರಿಕಾ, ಬೀಡಿ, ಹೋಟೆಲ್, ಆಸ್ಪತ್ರೆ, ಭದ್ರತಾ, ಮೀನುಗಾರಿಕೆ, ಗೇರು, ಕ್ವಾರಿ-ಕ್ರಷರ್, ಮಾಧ್ಯಮ, ಗೋದಾಮು ಹಾಗೂ ಸಣ್ಣ ಕೈಗಾರಿಕಾ ಕ್ಷೇತ್ರದ ಕಾರ್ಮಿಕರಿಗೆ ನ್ಯಾಯಯುತ ವೇತನ, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕು. MRPL, NMPT, KIOCL ಹಾಗೂ KSRTC ಸೇರಿದಂತೆ ಪ್ರಮುಖ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸಮಯಕ್ಕೆ ಸರಿಯಾಗಿ ವೇತನ ಪಾವತಿ, PF-ESI ಹಾಗೂ ಉದ್ಯೋಗ ಭದ್ರತೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.ಆಗಸ್ಟ್ 18ರಂದು ನಡೆಯಲಿರುವ ಪ್ರತಿಭಟನೆಯಲ್ಲಿ BMSನ ಎಲ್ಲಾ ಅಂಗಸಂಸ್ಥೆಗಳ ಪದಾಧಿಕಾರಿಗಳು, ಯೂನಿಯನ್ ಪ್ರಮುಖರು ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡಿದೆ.ಪತ್ರಿಕಾಗೋಷ್ಠಿಯಲ್ಲಿ BMS ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಹಿರಿಯ ಮುಖಂಡ ಬಿ.ಕೆ. ದೇವಪ್ಪ ಗೌಡ, ಪುತ್ತೂರು BMS ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕೆ. ಮರೀಲ್, ಅಧ್ಯಕ್ಷ ಹೇಮಂತ್ ಎಸ್. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.










