ಪುತ್ತೂರು: ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ಗೆ ಒಟ್ಟು ₹10 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ಅಶೋಕ್ ರೈ, ಪುತ್ತೂರು ಕ್ಷೇತ್ರದ ನಗರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಹಲವು ಒಳರಸ್ತೆಗಳು ಇನ್ನೂ ಅಭಿವೃದ್ಧಿಯಾಗಬೇಕಿದ್ದು, ಹಲವು ವರ್ಷಗಳಿಂದ ಜನರ ಬೇಡಿಕೆಗಳು ಬಾಕಿ ಉಳಿದಿವೆ. ಒಳಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನದ ಅಗತ್ಯವಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಗೆ ₹6.5 ಕೋಟಿ ಅನುದಾನ ಮಂಜೂರಾಗಿದೆ.ವಿಟ್ಲ ಪಟ್ಟಣ ಪಂಚಾಯತ್‌ಗೆ ₹3.5 ಕೋಟಿ ಅನುದಾನ ನೀಡಲಾಗಿದೆ. ವಿಟ್ಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಹೆಚ್ಚುವರಿ ಅನುದಾನ ನೀಡಲಾಗಿದ್ದು, ಮುಂದಿನ ಜನವರಿ ಅಥವಾ ಫೆಬ್ರವರಿಯೊಳಗೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದರೊಂದಿಗೆ ವಿಟ್ಲ ಪಟ್ಟಣದ ಹಲವು ರಸ್ತೆಗಳ ಅಭಿವೃದ್ಧಿಗೂ ವಿಶೇಷ ಅನುದಾನ ಬಳಸಿಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.ಪುತ್ತೂರು ಹಾಗೂ ವಿಟ್ಲದ ಅಭಿವೃದ್ಧಿಗೆ ಒಟ್ಟು ₹10 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕ ಅಶೋಕ್ ರೈ ಅಭಿನಂದನೆ ಸಲ್ಲಿಸಿದ್ದಾರೆ.










