ಮಂಗಳೂರು: ಬಿಜೈ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಲ್ಯಾಪ್‌ಟಾಪ್, ನಗದು ಸಹಿತ ಬ್ಯಾಗ್ ಕಳವಾಗಿರುವ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುತ್ತೂರಿನ ಪಿಕ್ಸೆಲ್ ಕ್ರಿಯೇಶನ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಆಗಿರುವ ದುರ್ಗಾ ಪ್ರಸಾದ್ ಬಂಗೇರ ಅವರು ಸೆ.17ರಂದು ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್‌ಇಡಿ ಪರದೆ ಅಳವಡಿಸಲು ಬಿಜೈಗೆ ಬಂದಿದ್ದರು. ಈ ವೇಳೆ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಅನ್ನು ವೇದಿಕೆ ಬಳಿಯ ಟೇಬಲ್ ಮೇಲಿಟ್ಟಿದ್ದರು. ಬಳಿಕ ಮರಳಿ ಬಂದು ನೋಡಿದಾಗ ಬ್ಯಾಗ್ ನಾಪತ್ತೆಯಾಗಿತ್ತು.ಬ್ಯಾಗ್‌ನಲ್ಲಿ ಕಂಪೆನಿಗೆ ಸೇರಿದ ₹65 ಸಾವಿರ ಮೌಲ್ಯದ ಲ್ಯಾಪ್‌ಟಾಪ್, ₹40 ಸಾವಿರ ನಗದು ಹಾಗೂ ಪರ್ಸ್‌ನಲ್ಲಿದ್ದ ₹5 ಸಾವಿರ ನಗದು, ಪಾನ್ ಕಾರ್ಡ್, ಚಾಲನಾ ಪರವಾನಗಿ ಮತ್ತಿತರ ದಾಖಲೆಗಳಿದ್ದವು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ₹1.10 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತು ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










