ಪುತ್ತೂರು: ಅಂದಾಜು ₹1.40 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ಕಾಮಗಾರಿ ಪೂರ್ಣಗೊಂಡಿದ್ದರೂ, ಇದುವರೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿಲ್ಲ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ನಗರ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ SDPI ಪುತ್ತೂರು ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಸಾಲ್ಮರ, ಸುಮಾರು ಒಂದೂವರೆ ತಿಂಗಳ ಹಿಂದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅವ್ಯವಸ್ಥೆ ಕುರಿತು ದೂರು ನೀಡಲಾಗಿತ್ತು. ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುದಾನದಲ್ಲಿ ಯೋಜನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೂ ಇ-ಮೇಲ್ ಮೂಲಕ ದೂರು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಈ ಕುರಿತು ಮಾಹಿತಿ ಕೇಳಿರುವುದಾಗಿ ತಿಳಿಸಿತ್ತು ಎಂದರು.ಕೇಂದ್ರಕ್ಕೆ ಸುಳ್ಳು ವರದಿ ನೀಡಿದ ಆರೋಪ: ಕೇಂದ್ರ ಸರ್ಕಾರದ ಪತ್ರದ ಬಳಿಕ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಕಚೇರಿ ಈಗಾಗಲೇ ಆರಂಭಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು. ಅಲ್ಲದೆ, ಬೀಗ ಹಾಕಲಾಗಿದ್ದ ಕಚೇರಿಯೊಳಗೆ ವ್ಯಕ್ತಿಯೊಬ್ಬರನ್ನು ಕೂರಿಸಿ ಫೋಟೋ ತೆಗೆದು ಕೇಂದ್ರ ಸರ್ಕಾರ ಹಾಗೂ ದೂರುದಾರರಿಗೆ ಕಳುಹಿಸಲಾಗಿದೆ. ಆದರೆ, ತಾವು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಚೇರಿಗೆ ಬೀಗ ಹಾಕಿರುವುದು ಕಂಡುಬಂದಿದೆ ಎಂದು ಹೇಳಿದರು.ಸಣ್ಣ ಕೊಠಡಿಯಲ್ಲೇ ಕಚೇರಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದರೂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ಇನ್ನೂ ಸಾಮರ್ಥ್ಯ ಸೌಧದ ಸಣ್ಣ ಕೊಠಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಸೂಕ್ತ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲದೆ ಬಿಸಿಲಿನಲ್ಲಿ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ ಎಂದು ದೂರಿದರು.₹26,868 ವಿದ್ಯುತ್ ಬಿಲ್ ಬಾಕಿ: ಕಚೇರಿ ಬಳಕೆಯಾಗದೆ ಇದ್ದರೂ ₹26,868ರಷ್ಟು ಮೆಸ್ಕಾಂ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು SDPI ಪುತ್ತೂರು ನಗರ ಸಮಿತಿ ಜೊತೆ ಕಾರ್ಯದರ್ಶಿ ಹರ್ಷದ್ ಹುಸೇನ್ ಆರೋಪಿಸಿದರು.21 ದಿನಗಳ ಗಡುವು: ₹1.40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಕಾಮಗಾರಿಯಲ್ಲಿ ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿದೆಯೇ ಎಂಬ ಅನುಮಾನ ಮೂಡಿದೆ. ಈ ಕುರಿತು ಶಾಸಕರು ಹಾಗೂ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಕಚೇರಿಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.ಮುಂದಿನ 21 ದಿನಗಳೊಳಗೆ ಕಚೇರಿ ಕಾರ್ಯಾರಂಭ ಮಾಡದಿದ್ದರೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ SDPI ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಸಿದರು.SDPI ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ಇಫಾಝ್ ಬನ್ನೂರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Join WhatsApp Group
error: Content is protected !!