ಮಂಗಳೂರು ನ್ಯಾಯಾಲಯದಿಂದ ಪೊಲೀಸ್ ವಶದಲ್ಲಿದ್ದ ಆರೋಪಿ ಪರಾರಿಕೊಲೆ ಪ್ರಕರಣದ ಆರೋಪಿಗೆ ಜಾಮೀನು ಸಿಗದೆ; ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪರಾರಿಮಂಗಳೂರು: ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದ ಆರೋಪಿಯೊಬ್ಬ ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮಂಗಳೂರಿನ ನ್ಯಾಯಾಲಯ ಸಂಕೀರ್ಣದಲ್ಲಿ ಸೆ.22ರಂದು ನಡೆದಿದೆ.ಮೂಡಬಿದ್ರೆ ಪೊಲೀಸ್ ಠಾಣೆಯ ಕ್ರೈಂ ನಂಬ‌ರ್ 292/2018ರ ಕಲಂ 302 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೆ.22ರಂದು ವಿಚಾರಣೆ ನಿಗದಿಯಾಗಿತ್ತು. ಪ್ರಕರಣದ ಐವರು ಆರೋಪಿಗಳ ಪೈಕಿ ಸಂದೀಪ್ ಶೆಟ್ಟಿ, ಪ್ರಸಾದ್, ಬಾಲರಾಜ್ ಹಾಗೂ ಪ್ರಭಾಕರ್ ಎಂಬ ನಾಲ್ವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.ಈ ಹಿಂದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಸಾದ್ ವಿರುದ್ಧ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ವಿಚಾರಣೆ ವೇಳೆ ಪ್ರಸಾದ್ ಪರ ಯಾವುದೇ ವಕೀಲರು ಹಾಜರಿರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು. ಬಳಿಕ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪಿಸಿ 866 ವಿನಾಯಕ ಸಂಶಿ ಅವರ ವಶಕ್ಕೆ ಆರೋಪಿಯನ್ನು ಒಪ್ಪಿಸಲಾಯಿತು.ನಂತರ ಮೂಡಬಿದ್ರೆ ಪೊಲೀಸ್ ಠಾಣೆಯ ಪಿಸಿ 3233 ಅಶೋಕ್ ಎಸ್.ಟಿ. ಅವರು ಆರೋಪಿಯನ್ನು ವಶಕ್ಕೆ ಪಡೆದು, ರಿಮಾಂಡ್ ವಾರೆಂಟ್ ಸ್ವೀಕರಿಸಿದರು. ಆರೋಪಿಯು ತನ್ನ ಬಳಿ ಇದ್ದ ಪ್ರಕರಣದ ಕಡತದೊಂದಿಗೆ ನ್ಯಾಯಾಲಯದಲ್ಲಿದ್ದ ಇತರ ವಕೀಲರನ್ನು ಸಂಪರ್ಕಿಸಿ ಜಾಮೀನಿಗಾಗಿ ಮನವಿ ಮಾಡಿದ್ದರೂ ಯಾರೂ ಜಾಮೀನು ನೀಡಲು ಮುಂದಾಗಿರಲಿಲ್ಲ ಎನ್ನಲಾಗಿದೆ.ಬಳಿಕ ಆರೋಪಿಯನ್ನು ರಿಮಾಂಡ್ ವಾರೆಂಟ್‌ನೊಂದಿಗೆ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದ ವೇಳೆ, ಮಧ್ಯಾಹ್ನ ಸುಮಾರು 3.30ಕ್ಕೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬಳಿಯ ಶೌಚಾಲಯಕ್ಕೆ ತೆರಳುವುದಾಗಿ ತಿಳಿಸಿದ್ದಾನೆ. ಶೌಚಾಲಯಕ್ಕೆ ತೆರಳಿದ ಬಳಿಕ ಪೊಲೀಸ್ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!