ಉಪ್ಪಿನಂಗಡಿ: ಸಾರ್ವಜನಿಕರಿಗೆ ನೀಡಬೇಕಾದ ಸೇವೆಯಲ್ಲಿ ವಿಳಂಬ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಪ್ರಭಾರ ಅಭಿವೃದ್ಧಿ ಅಧಿಕಾರಿ ಹಾಗೂ ಪ್ರಸ್ತುತ ಆರ್ಯಾಪು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಅವರು ಸೆ.22ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.ಅಮಾನತು ಆದೇಶದಲ್ಲಿ, ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ.ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ದೂರುಸೆ.9ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತಗಳ ಪರಿಶೀಲನೆಗಾಗಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಈ ಸಂದರ್ಭ ಸಾರ್ವಜನಿಕರಿಂದ ಪಿಡಿಒ ವಿರುದ್ಧ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಸಾರ್ವಜನಿಕರ ಅಹವಾಲುಗಳ ಪರಿಶೀಲನೆ ವೇಳೆ 18 ಮಂದಿಯ ವ್ಯಾಪಾರ ಪರವಾನಗಿ ಅರ್ಜಿಗಳಿಗೆ ಪರವಾನಗಿ ನೀಡದೆ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ಹಲವು ಅಂಶಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದವು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಅಬ್ದುಲ್ ರಹಿಮಾನ್ ಪಿ.ಎ., ಸಂಜೀವ ಪೂಜಾರಿ, ಆಶ್ರಫ್ ಪೆರಿಯಡ್ಕ, ಖೈಜಮ್ಮ ಪೆರಿಯಡ್ಕ, ಅತುಲ್ ಕಶ್ಯಪ್ ಟಿ. ಪಂಜಳ, ಮಾಜಿ ಪಂಚಾಯತ್ ಸದಸ್ಯ ವಿನಾಯಕ ಪೈ, ಲಲಿತಾ, ಉಪ್ಪಿನಂಗಡಿ ಪೇಟೆಯ ಹಣ್ಣು-ತರಕಾರಿ ವ್ಯಾಪಾರಿಗಳು ಸೇರಿದಂತೆ ಹಲವು ಮಂದಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.ಕೆಡಿಪಿ ಸಭೆಯಲ್ಲಿ ಆಕ್ಷೇಪಪಿಡಿಒ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿರುವ ನಡುವೆಯೂ ಅವರಿಗೆ ಮತ್ತೆ ಉಪ್ಪಿನಂಗಡಿ ಗ್ರಾ.ಪಂ.ನ ಪ್ರಭಾರ ನೀಡಿರುವ ಬಗ್ಗೆ ಸೆ.15ರಂದು ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಪಿಡಿಒ ವರ್ಗಾವಣೆಗೆ ಆಗ್ರಹಿಸಿದ್ದರು.ಇದಾದ ಬಳಿಕ ಜಿಲ್ಲಾ ಪಂಚಾಯತ್ ಸಿಇಒ ಅವರು ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರ ಉಪ್ಪಿನಂಗಡಿ ಗ್ರಾ.ಪಂ. ಪ್ರಭಾರವನ್ನು ರದ್ದುಗೊಳಿಸಿ, 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ರವಿಚಂದ್ರ ಅವರಿಗೆ ಹೆಚ್ಚುವರಿ ಪ್ರಭಾರ ಜವಾಬ್ದಾರಿ ವಹಿಸಿದ್ದರು.ಆರೋಪ ನಿರಾಕರಿಸಿದ್ದ ಪಿಡಿಒಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಮುಂತಾದ ಆರೋಪಗಳ ಕುರಿತು ಪಿಡಿಒ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.ನೋಟಿಸ್‌ಗೆ ಲಿಖಿತ ಸಮಜಾಯಿಷಿ ನೀಡಿದ್ದ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ಆದರೆ, ಆರೋಪಗಳನ್ನು ನಿರಾಕರಿಸಲು ಸಮರ್ಥನೀಯ ಹಾಗೂ ಸಮರ್ಪಕ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದು ಹಾಗೂ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಅನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.











