ಪುತ್ತೂರು: ಪೂಜೆ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಪುರೋಹಿತನ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ಮೇ 4ರ ರಾತ್ರಿ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ.
ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಅವರ ಪುತ್ರ ಗಣೇಶ್ ವಿ. (39) ಹಲ್ಲೆಗೊಳಗಾದವರು. ಅವರು ಕಲ್ಲಡ್ಕದ ಉಮಾಶಿವಕ್ಷೇತ್ರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಕಾರಿನಲ್ಲಿ (ಕೆಎ01-ಎಂಎಲ್ 9704) ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ವಿದ್ಯಾಪುರದಲ್ಲಿ ರಸ್ತೆ ಬದಿಯ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರಿಂದ ರಸ್ತೆ ಮೇಲೆ ಜನರು ಹಾಗೂ ವಾಹನಗಳ ದಟ್ಟಣೆ ಕಂಡುಬಂದಿತ್ತು. ಇದರಿಂದ ನಿಧಾನವಾಗಿ ಕಾರು ಚಲಾಯಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಏಕಾಏಕಿ ಕಾರನ್ನು ತಡೆದಿದ್ದಾನೆ.
ಗಣೇಶ್ ಅವರು ಕಾರಿನ ಗಾಜನ್ನು ಇಳಿಸಿದಾಗ, ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಕಾರಿನಿಂದ ಇಳಿದಾಗ ಮತ್ತಷ್ಟು ಹಲ್ಲೆ ನಡೆಸಿ ಕಾಲಿನಿಂದ ತುಳಿದು ಗಾಯಪಡಿಸಿದ್ದು, ಪ್ರಕರಣ ದಾಖಲಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಗಣೇಶ್ ಭಟ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಕಲಂ 126(2), 115(2), 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







