ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್‌ಗಳನ್ನು (ಎನ್‌ಬಿಡಬ್ಲ್ಯು) ತಪ್ಪಿಸಿಕೊಂಡು 2018ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಉಪ್ಪಳ ಪಾವಲಿಕೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಕಾಪ್ರಿ ಸಿದ್ದೀಕ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ಎನ್‌ಬಿಡಬ್ಲ್ಯು ವಾರಂಟ್‌ಗಳು ಬಾಕಿ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ 74/2017ನೇ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ 380 ಮತ್ತು 411 ಕಲಂಗಳು ಅನ್ವಯವಾಗಿದ್ದರೆ, ಕೊಣಾಜೆ ಪೊಲೀಸ್ ಠಾಣೆಯ 68/2018 ಹಾಗೂ ಕಂಕನಾಡಿ ಪೊಲೀಸ್ ಠಾಣೆಯ 149/2017 ಪ್ರಕರಣಗಳಲ್ಲಿ 379, 411 ಐಪಿಸಿ ಕಲಂಗಳೊಂದಿಗೆ ಗೋಹತ್ಯೆ ನಿಷೇಧ ಕಾಯ್ದೆಯ ವಿವಿಧ ಕಲಂಗಳು ದಾಖಲಾಗಿದ್ದವು.
ಆರೋಪಿ ಸುಮಾರು ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ವಾರಂಟು ಆರೋಪಿಗಳ ಪತ್ತೆಗಾಗಿ ರಚಿಸಲಾದ ವಿಶೇಷ ತಂಡ ಆರೋಪಿಯ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಪಿಎಸ್‌ಐ ಸಿದ್ದಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!