ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುರಕ್ಷತೆ ಹಾಗೂ ಭಕ್ತರ ಸುಗಮ ಸಂಚಾರದ ದೃಷ್ಟಿಯಿಂದ ಕೈಗೊಂಡಿರುವ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಭಕ್ತರ ನಿಯೋಗವೊಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದೆ.ದೇವಸ್ಥಾನದ ರಸ್ತೆ ಕಾಮಗಾರಿ ಆರಂಭವಾದ ಬಳಿಕ ಕೆಲವರು ಅನಗತ್ಯ ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ನಡೆಯದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಸುರಕ್ಷಿತವಾಗಿ ಹಾಗೂ ಸುಗಮವಾಗಿ ಸಂಚರಿಸಲು ಈ ರಸ್ತೆ ಅತ್ಯಗತ್ಯವಾಗಿದ್ದು, ಯಾವುದೇ ವಿಳಂಬವಿಲ್ಲದೆ ಕಾಮಗಾರಿಯನ್ನು ಪೂರ್ಣಗೊಳಿಸಿ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಭಕ್ತರು ಮನವಿ ಮಾಡಿದ್ದಾರೆ.ಭಕ್ತರಾದ ದಿನೇಶ್ ಪೂಜಾರಿ, ಗಣೇಶ್ ಗೌಡ, ಯತೀಶ್ ಪೂಜಾರಿ, ಆಕಾಶ್ ಹಾಗೂ ಸಂತೋಷ್ ಶೆಣೈ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.










