ಮಂಗಳೂರು: ಕಾಲೇಜು ಆಡಳಿತವು ಮಾದಕ ವಸ್ತು ನಿಯಂತ್ರಣಕ್ಕೆ ಕೈಗೊಂಡಿದ್ದ ಕಟ್ಟುನಿಟ್ಟಿನ ತಪಾಸಣೆ ವೇಳೆ ಸುಮಾರು 290 ಗ್ರಾಂ ಗಾಂಜಾವನ್ನು ಹಲವು ಸಣ್ಣ ಪ್ಯಾಕೆಟ್‌ಗಳಲ್ಲಿ ಇಟ್ಟುಕೊಂಡಿದ್ದ ಮೂವರು ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಕಾಲೇಜು ಆಡಳಿತವು ಕ್ಯಾಂಪಸ್‌ನಲ್ಲಿ ನಿಗಾವನ್ನು ಬಿಗಿಗೊಳಿಸಿ ನಿಯಮಿತ ತಪಾಸಣೆ ಆರಂಭಿಸಿತ್ತು. ಈ ವೇಳೆ ವಿದ್ಯಾರ್ಥಿಗಳ ಬಳಿ ಗಾಂಜಾ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.ವೈದ್ಯಕೀಯ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8(ಸಿ) ಹಾಗೂ 27(ಬಿ) ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.ಕಾಲೇಜಿಗೆ ಗಾಂಜಾ ತಂದಿದ್ದಾನೆ ಎನ್ನಲಾದ ವಿದ್ಯಾರ್ಥಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿದ್ಯಾರ್ಥಿಯಾಗಿರುವುದು ಹಾಗೂ ಪ್ರಕರಣದ ಸನ್ನಿವೇಶವನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡಿದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಹಲವು ಕಾಲೇಜುಗಳಲ್ಲಿ ಆಂಟಿ-ಡ್ರಗ್ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜು ಆಡಳಿತಗಳು ಸ್ವಯಂಪ್ರೇರಿತವಾಗಿ ತಪಾಸಣೆ ನಡೆಸುತ್ತಿರುವುದು ಮಾದಕ ವಸ್ತು ನಿಯಂತ್ರಣಕ್ಕೆ ಪೂರಕ ಬೆಳವಣಿಗೆಯಾಗಿದೆ.










