ಪುತ್ತೂರು: ಕಂಬಳಕೋಡಿ ಭಾಗದ ಸುಮಾರು 25 ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಪೂರ್ಣಗೊಳಿಸುವಂತೆ ಅಲ್ಲಿನ ನಿವಾಸಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.ಕಂಬಳಕೋಡಿ ಭಾಗಕ್ಕೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಬಂದಿದೆ. ಪ್ರಸ್ತುತ ರಥಬೀದಿಯ ಮಧ್ಯೆ ರಸ್ತೆ ಸಂಪರ್ಕ ಇರುವುದರಿಂದ ದೇವಸ್ಥಾನದ ರಕ್ಷಣೆಗೆ ತೊಂದರೆಯಾಗುತ್ತಿರುವುದನ್ನು ಮನಗಂಡು, ತೋಡಿನ ಬದಿಯಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದೆವು ಎಂದು ನಿವಾಸಿಗಳು ತಿಳಿಸಿದ್ದಾರೆ.ಈ ರಸ್ತೆ ಕಾಮಗಾರಿ ಆರಂಭವಾದ ಬಳಿಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ನಿವೃತ್ತ ಶಿಕ್ಷಕಿ ವೇದಾವತಿ ಮಾತನಾಡಿ, “ದೇವಸ್ಥಾನದ ಜಾಗಕ್ಕೆ ಹೊಂದಿಕೊಂಡಿರುವ ಸುಮಾರು 25 ಮನೆಗಳಿಗೆ ಸಮರ್ಪಕ ರಸ್ತೆ ಇಲ್ಲ. ಪ್ರತಿ ಮಳೆಗಾಲದಲ್ಲೂ ತೋಡಿನ ನೀರು ಮನೆಗಳಿಗೆ ನುಗ್ಗುತ್ತದೆ. ನಾವು ಮೂಲಭೂತ ಸೌಕರ್ಯವನ್ನು ಮಾತ್ರ ಕೇಳುತ್ತಿದ್ದೇವೆ. ಇದರೊಂದಿಗೆ ದೇವಸ್ಥಾನಕ್ಕೂ ಸೂಕ್ತ ರಕ್ಷಣೆ ಒದಗಬೇಕು,” ಎಂದರು.ದಿವಾಕರ ಮಡಿವಾಳ ಮಾತನಾಡಿ, “ಹಿಂದೆ ಗದ್ದೆಯ ಹುಣಿಯಲ್ಲಿ ನಡೆದು ಸಂಚರಿಸುತ್ತಿದ್ದೆವು. ಈಗ ತೋಡಿನ ಬದಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಟ್ಟಾ ಜಾಗಗಳನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ. ಆದ್ದರಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕು,” ಎಂದು ಹೇಳಿದರು.ಕಂಬಳಕೋಡಿ ಭಾಗದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅನಾರೋಗ್ಯದ ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ವಾಹನಗಳು ಮನೆಗಳವರೆಗೆ ತಲುಪಲು ರಸ್ತೆ ಸಂಪರ್ಕದ ಕೊರತೆಯಿದೆ. ಹೀಗಾಗಿ ನೂತನ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜೇಶ್, ನಿವೃತ್ತ ಶಿಕ್ಷಕಿ ವೇದಾವತಿ, ಶಿಕ್ಷಕ ಶ್ರೀಕಾಂತ್, ದಿವಾಕರ ಮಡಿವಾಳ, ಯೋಗೀಶ್, ವಿಶ್ವೇಶ್ವರ, ಗಿರೀಶ್ ಸೇರಿದಂತೆ ಕಂಬಳಕೋಡಿ ನಿವಾಸಿಗಳು ಉಪಸ್ಥಿತರಿದ್ದರು.










