ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮನೆಯೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ನಾಲ್ಕು ಕುಟುಂಬಗಳಿಗೆ ಸೇರಿದ ಒಟ್ಟು 23 ಮಂದಿ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಅಲ್ಲಿ ತಂಗಿರುವುದು ಪತ್ತೆಯಾಯಿತು. ವಿಚಾರಣೆಯಲ್ಲಿ ಅವರು ಬೆಂಗಳೂರಿನ ಪರಿಚಿತ ಕುಟುಂಬಗಳಾಗಿದ್ದು, ಮಂಗಳೂರಿಗೆ ಪ್ರವಾಸದ ನಿಮಿತ್ತ ಬಂದಿರುವುದಾಗಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಪರಿಚಯವಿರುವ ಬೆಂಗಳೂರಿನ ಚರ್ಚ್‌ನ ಫಾದರ್ ಅವರ ತಮ್ಮನ ಮನೆಯಲ್ಲಿ ತಂಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಎಲ್ಲರೂ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಕಳೆದ 15ರಿಂದ 20 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. ಯಾವುದೇ ಬಲವಂತದ ಮತಾಂತರ ನಡೆದಿಲ್ಲ ಎಂಬುದೂ ಪೊಲೀಸರ ಗಮನಕ್ಕೆ ಬಂದಿದೆ.
ಈ ಸಂಬಂಧ ನಡೆದ ಪರಿಶೀಲನೆಯಲ್ಲಿ ಅನೈತಿಕ ಚಟುವಟಿಕೆ ಅಥವಾ ಬಲವಂತದ ಮತಾಂತರ ನಡೆದಿರುವ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.














