
ಕೇ ರಳದ ತಿರುವನಂತಪುರದಲ್ಲಿ ಅಮೆರಿಕದ ಕೋರಿಕೆಯ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಕೇರಳ ಪೊಲೀಸರು ಲಿಥುವೇನಿಯನ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಅಲೆಕ್ಸ್‌ಜೇ ಬೆಸ್ಕಿಯೊಕೊವ್ (46) ಬಂಧಿತ ಆರೋಪಿ. ಈತ ಅಮೆರಿಕದ ಅಧಿಕಾರಿಗಳಿಗೆ ಬೇಕಾಗಿದ್ದ. ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಯಾದ ಗ್ಯಾರಂಟೆಕ್ಸ್ ಅನ್ನು ನಿರ್ವಹಿಸುತ್ತಿದ್ದ ಮತ್ತು ನಿಯಂತ್ರಿಸುತ್ತಿದ್ದ ರಷ್ಯಾದ ಪ್ರಜೆ ಅಲೆಕ್ಸಾಂಡರ್ ಮಿರಾ ಸೆರ್ಡಾ ಜೊತೆಗೆ ಅಮೆರಿಕದ ಸೀಕ್ರೆಟ್ ಸರ್ವಿಸ್‌ನಿಂದ ಆರೋಪ ಹೊರಿಸಲಾಗಿದೆ..
ವಿನಿಮಯವು ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳು (ಭಯೋತ್ಪಾದಕ ಸಂಘಟನೆಗಳು ಸೇರಿದಂತೆ) ಹಣ ವರ್ಗಾವಣೆ ಮತ್ತು ನಿರ್ಬಂಧಗಳ ಉಲ್ಲಂಘನೆಗೆ ಸಹಾಯ ಮಾಡಿದೆ ಎಂದು ಆರೋಪಿಸಲಾಗಿದೆ. 2019ರ ಏಪ್ರಿಲ್‌ನಿಂದ ಗ್ಯಾರಂಟೆಕ್ಸ್ ಕನಿಷ್ಠ 96 ಬಿಲಿಯನ್ ಡಾಲರ್ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ನಡೆಸಿದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಆರೋಪಿಸಿದೆ. ಗ್ಯಾರಂಟೆಕ್ಸ್ ನೂರಾರು ಮಿಲಿಯನ್ ಅಪರಾಧದ ಆದಾಯವನ್ನು ಪಡೆದುಕೊಂಡಿದೆ ಮತ್ತು ಹ್ಯಾಕಿಂಗ್, ರಾನ್ಸಮ್‌ವೇರ್, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳಿಗೆ ಸಹಾಯ ಮಾಡಿದೆ.
ಬೆಸ್ಕಿಯೊಕೊವ್ ಗ್ಯಾರಂಟೆಕ್ಸ್‌ನ ಪ್ರಾಥಮಿಕ ತಾಂತ್ರಿಕ ನಿರ್ವಾಹಕರಾಗಿದ್ದರು ಮತ್ತು ನಿರ್ಣಾಯಕ ಗ್ಯಾರಂಟೆಕ್ಸ್ ಮೂಲಸೌಕರ್ಯವನ್ನು ಪಡೆದುಕೊಳ್ಳುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಹಣ ವರ್ಗಾವಣೆ ಮಾಡಲು ಪಿತೂರಿ, ಅಮೆರಿಕದ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯನ್ನು ಉಲ್ಲಂಘಿಸಲು ಪಿತೂರಿ ಮತ್ತು ಪರವಾನಗಿ ಇಲ್ಲದ ಹಣ ಸೇವೆಗಳ ವ್ಯವಹಾರವನ್ನು ನಿರ್ವಹಿಸಲು ಪಿತೂರಿ ಸೇರಿದಂತೆ ಹಲವಾರು ಆರೋಪಗಳನ್ನು ಅಮೆರಿಕದ ಅಧಿಕಾರಿಗಳು ಹೊರಿಸಿದ್ದಾರೆ. ಇವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
