ಇಸ್ರೇಲಿ ರಕ್ಷಣಾ ಪಡೆಗಳು ಶುಕ್ರವಾರ ಬೆಳಿಗ್ಗೆ ಇರಾನ್ ಮೇಲೆ ದಾಳಿ (Israel-Iran War) ಮಾಡಿದ್ದು, ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ. ಜೊತೆಗೆ ಹಲವಾರು ಕ್ಷಿಪಣಿಗಳನ್ನೂ ಹಾರಿಸಿದೆ. ಆದರೆ ಈ ಡ್ರೋನ್‌ಗಳು ಟಾರ್ಗೆಟ್‌ ಮುಟ್ಟುವಲ್ಲಿ ವಿಫಲವಾಗಿದ್ದು, ಅವುಗಳನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿದೆ ಎಂದು‌ ಹೇಳಿಕೊಂಡಿದೆ.

ಇರಾನ್‌ ಮೇಲಿನ ಇಸ್ರೇಲ್‌ ವಾಯುದಾಳಿಯಲ್ಲಿ ಸೇನಾ ಮುಖ್ಯಸ್ಥ ಮೊಹಮ್ಮದ್ ಬಾಘೇರಿ ಮತ್ತು ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್-ಇನ್-ಚೀಫ್ ಹೊಸೈನ್ ಸಲಾಮಿ ಮತ್ತು ಹಿರಿಯ ಪರಮಾಣು ವಿಜ್ಞಾನಿ ಡಾ. ಮೊಹಮ್ಮದ್ ಮೆಹಂದಿ ಟೆಹ್ರಾನ್ಚಿ ಸೇರಿದಂತೆ 78 ಜನ ಸಾವನ್ನಪ್ಪಿದ್ದು, 328 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದೀರ್ಘಕಾಲದ ಪ್ರತಿಸ್ಪರ್ಧಿಗಳಾಧ ಇರಾನ್ ಮತ್ತು ಇಸ್ರೇಲ್ ನಡುವಿನ ಈ ಸಂಘರ್ಷ ಸಂಪೂರ್ಣ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಇಸ್ರೇಲ್ ದಾಳಿಯ ನಂತರ ಇರಾನ್ ಸಹ ಪ್ರತಿಕಾರ ನಡೆಸಿದೆ. ಈ ಕುರಿತು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಎಫೀ ಡೆಫ್ರಿನ್ ಅವರು ಮಾತನಾಡಿ, “ಇರಾನ್‌ನಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥರು, ಐಆರ್‌ಜಿಸಿಯ ಕಮಾಂಡರ್ ಮತ್ತು ಇರಾನ್‌ನ ತುರ್ತು ಕಮಾಂಡ್‌ನ ಕಮಾಂಡರ್ ಎಲ್ಲರೂ ಹತರಾಗಿದ್ದಾರೆ ಎಂದು ನಾವು ಈಗ ದೃಢೀಕರಿಸಬಹುದು” ಎಂದು ಹೇಳಿದ್ದಾರೆ. ಏತನ್ಮಧ್ಯೆ, ಜೋರ್ಡಾನ್ ವಾಯುಪ್ರದೇಶದಲ್ಲಿ ಹಲವಾರು ಇರಾನಿನ ಡ್ರೋನ್‌ಗಳನ್ನು ತಡೆಹಿಡಿದಿದೆ ಎಂದು ಜೋರ್ಡಾನ್‌ನ ರಾಜ್ಯ ಮಾಧ್ಯಮ ವರದಿ ಮಾಡುತ್ತಿದ್ದಂತೆ ಉತ್ತರ ಜೋರ್ಡಾನ್‌ನಲ್ಲಿ ರಾಕೆಟ್ ಸೈರನ್‌ಗಳು ಮೊಳಗಿದವು.

ಇರಾನ್ ಮಿಲಿಟರಿ ಮತ್ತೊಂದು ಪೋಸ್ಟ್ ಅನ್ನು ಪೋಸ್ಟ್ ಮಾಡಿ, ‘ಯಾರನ್ನೂ ಎಂದಿಗೂ ಯುದ್ಧಕ್ಕೆ ಆಹ್ವಾನಿಸಬೇಡಿ (ಯುದ್ಧದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಬೇಡಿ), ಆದರೆ ಯಾರಾದರೂ ನಿಮ್ಮನ್ನು ಯುದ್ಧಕ್ಕೆ ಕರೆದರೆ, ಅವರಿಗೆ ಪ್ರತಿಕ್ರಿಯಿಸಿ (ಮತ್ತು ಶತ್ರುಗಳ ವಿರುದ್ಧ ಯುದ್ಧದಲ್ಲಿ ಯಾವುದೇ ಮೃಧು ಧೋರಣೆ ತೋರಿಸಬೇಡಿ), ಏಕೆಂದರೆ ಹೋರಾಡಲು ಆಹ್ವಾನಿಸುವವನು ನಿರಂಕುಶಾಧಿಕಾರಿ. ಮತ್ತು ನಿರಂಕುಶಾಧಿಕಾರಿ ಯಾವಾಗಲೂ ಸೋಲಿಸಲ್ಪಡುತ್ತಾನೆ’ ಎಂದೂ ತಿಳಿಸಿದೆ.

ಶುಕ್ರವಾರ ಮುಂಜಾನೆ, ಇಸ್ರೇಲ್ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ಮಾಡಿ ಅದನ್ನು ನಾಶಪಡಿಸಿತು. ಇರಾನ್‌ನ ನಟಾಂಜ್ ಮತ್ತು ಫೋರ್ಡೊ ಪರಮಾಣು ತಾಣಗಳಲ್ಲಿ ಸ್ಫೋಟ ಸಂಭವಿಸಿದೆ. ಇದು ಮಾತ್ರವಲ್ಲದೆ, ಟೆಹ್ರಾನ್‌ನ ಇಮಾಮ್ ಖೊಮೇನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟದ ಸುದ್ದಿಯೂ ಇದೆ. ಇಸ್ರೇಲ್ ದಾಳಿಯ ನಂತರ ಕೋಲಾಹಲ ಉಂಟಾಗಿದೆ. ಇರಾನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಇಸ್ರೇಲ್ ಈ ದಾಳಿಯನ್ನು ಅದರ ಮೊದಲ ಹಂತ ಎಂದು ಬಣ್ಣಿಸಿದೆ. ಇಸ್ರೇಲ್ ದಾಳಿ ಮುಂದುವರಿಯುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸುದ್ದಿ ಸಂಸ್ಥೆ ಸಿಎನ್‌ಎನ್ ಪ್ರಕಾರ, ಇದು ಇರಾನ್ ಮೇಲೆ ಒಂದು ದಿನದ ದಾಳಿಯಲ್ಲ ಎಂದು ಇಸ್ರೇಲ್ ಹೇಳಿದೆ. ದಾಳಿಯಲ್ಲಿ ಇರಾನ್‌ನ ಮುಖ್ಯಸ್ಥರನ್ನೂ ಗುರಿಯಾಗಿಸಲಾಗಿದೆ ಎಂದು ಮೂಲಗಳು ಹೇಳಿವೆ. ವಾಸ್ತವವಾಗಿ, ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಹಲವು ದಿನಗಳ ಹಿಂದೆಯೇ ವ್ಯಕ್ತವಾಗಿತ್ತು. ಏತನ್ಮಧ್ಯೆ, ಇರಾನ್ ಮೇಲೆ ಇಸ್ರೇಲ್ ದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದು ಅಮೆರಿಕ ಹೇಳಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!