ಪರ್ಷಿಯನ್ ಗಲ್ಫ್ ವಲಯದಲ್ಲಿ ಇರಾನ್ ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದ ಅಮೆರಿಕ ವಾಯುಪಡೆಯ ‘KC-135 ಸ್ಟ್ರಾಟೋಟ್ಯಾಂಕರ್’ (KC-135 Stratotanker) ವಿಮಾನವು ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ಸಂದೇಶ ರವಾನಿಸಿದ ಬೆನ್ನಲ್ಲೇ ರೇಡಾರ್ ಸಂಪರ್ಕದಿಂದ ಕಡಿತಗೊಂಡಿದೆ.
ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ವಿಮಾನವು ಹಾರಾಟದ ಮಧ್ಯೆ ಗಂಭೀರ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿಯನ್ನು ಸೂಚಿಸುವ ಅಂತರಾಷ್ಟ್ರೀಯ ಸಂಕೇತವಾದ ‘7700’ ಅನ್ನು ರವಾನಿಸಿದೆ.ಸಂಯುಕ್ತ ಅರಬ್ ಎಮಿರೇಟ್ಸ್‌ನ (UAE) ಅಲ್ ಧಫ್ರಾ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದ ಈ ವಿಮಾನವು, ಕತಾರ್ ಕಡೆಗೆ ಸಾಗುತ್ತಿದ್ದಾಗ ಪರ್ಷಿಯನ್ ಗಲ್ಫ್ ಮೇಲೆ ನಾಪತ್ತೆಯಾಗಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ.
ನಾಪತ್ತೆಯಾಗುವ ಮೊದಲು ವಿಮಾನವು ಆಕಾಶದಲ್ಲಿ ವೃತ್ತಾಕಾರವಾಗಿ (Holding Pattern) ಸುತ್ತುತ್ತಿದ್ದುದು ಕಂಡುಬಂದಿದೆ. ಇದು ಸಾಮಾನ್ಯವಾಗಿ ಇಂಧನ ಖಾಲಿ ಮಾಡಲು ಅಥವಾ ತುರ್ತು ಲ್ಯಾಂಡಿಂಗ್‌ಗೆ ಸಿದ್ಧತೆ ನಡೆಸುವಾಗ ಪೈಲಟ್‌ಗಳು ಅನುಸರಿಸುವ ಕ್ರಮವಾಗಿದೆ.
KC-135 ವಿಮಾನವನ್ನು ‘ಹಾರುವ ಪೆಟ್ರೋಲ್ ಬಂಕ್’ ಎಂದು ಕರೆಯಲಾಗುತ್ತದೆ. ಇದು ಯುದ್ಧ ವಿಮಾನಗಳಿಗೆ ಹಾರಾಟದ ಮಧ್ಯೆಯೇ ಇಂಧನ ತುಂಬಿಸುವ ಪ್ರಮುಖ ಕೆಲಸ ಮಾಡುತ್ತದೆ. ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷದ ವಾತಾವರಣ ಇರುವಾಗಲೇ ಈ ಘಟನೆ ನಡೆದಿರುವುದು ಕುತೂಹಲ ಮೂಡಿಸಿದೆ.
ವಿಮಾನದ ಪೈಲಟ್‌ಗಳು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಾಗ, ಎಂಜಿನ್ ವೈಫಲ್ಯವಾದಾಗ ಅಥವಾ ವಿಮಾನದ ನಿಯಂತ್ರಣ ತಪ್ಪಿದಾಗ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ‘7700’ ಸಂಕೇತವನ್ನು ರವಾನಿಸುತ್ತಾರೆ. ಇದು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ವಿಮಾನವು ಅತ್ಯಂತ ಅಪಾಯದಲ್ಲಿದೆ ಎಂಬ ಸಂದೇಶ ನೀಡುತ್ತದೆ.














